ರೈತರು ಜಮೀನು ಸರ್ವೆ ಮಾಡಿಸುವುದರ ಬಗ್ಗೆ ಮಾತನಾಡುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಹಲವಾರು ಕಾರಣಗಳಿಂದ ರೈತರು ತಮ್ಮ ಜಮೀನನ್ನು ಸರ್ವೇ ಮಾಡಿಸಬೇಕಾಗುತ್ತದೆ. ರೈತರು ಅರ್ಜಿಗಳನ್ನು ಸಲ್ಲಿಸಿದಾಗ ಈ ರೀತಿ ರೈತರ ಜಮೀನನ್ನು ಸರ್ವೇ ಮಾಡಿಕೊಡುವ ಕೆಲಸ ಭೂಮಾಪನ ಇಲಾಖೆಗೆ ಸೇರಿದ್ದಾಗಿದೆ. ಭೂ ಮಾಪನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅಳತೆ ಮಾಡಿ ಕೊಟ್ಟ ದಾಖಲೆ ಪತ್ರವಷ್ಟೇ ಸರ್ವೆ ಆಗಿದೆ ಎನ್ನುವುದಕ್ಕೆ ಮಾನ್ಯವಾಗುತ್ತದೆ.
ಸರ್ಕಾರದ ಹಲವು ಯೋಜನೆಗಳನ್ನು ಪಡೆಯಲು ಈ ರೀತಿ ಸರ್ವೇ ಮಾಡಿಸುವ ಅನಿವಾರ್ಯತೆ ಇರುತ್ತದೆ ಅಥವಾ ಅಣ್ಣ-ತಮ್ಮಂದಿರ ನಡುವೆ ಆಸ್ತಿ ವಿಭಾಗ ಆದಾಗ ಪೋಡಿ ಆದಾಗ ಅಕ್ಕಪಕ್ಕದ ಜಾಗದವರು ಗಡಿಗಾಗಿ ತಕರಾರು ಮಾಡಿದಾಗ ಮತ್ತು ನಮ್ಮ ಜಮೀನನ್ನು ಹದ್ದುಬಸ್ತಿನಲ್ಲಿ ಇಡಲು ಸರ್ವೇ ಮಾಡಿಸುವ ಕೆಲಸ ಅನಿವಾರ್ಯವಾಗಿರುತ್ತದೆ.
ಕುಟುಂಬದ ನಡುವೆ ಆಸ್ತಿ ವಿಭಾಗ ಆಗಿದ್ದರೂ ಸರ್ವೆ ಕಾರ್ಯ ಮಾಡಿಸಲೇಬೇಕು. ದಾನ, ಕ್ರಯ, ವಿಭಾಗ ಪತ್ರದ ಮೂಲಕ ಆಸ್ತಿಯನ್ನು ಬೇರೆಯವರ ಹೆಸರಿಗೆ ಮಾಡುವಾಗ ಸರ್ವೆ ಮಾಡಿಸಲೇಬೇಕು. ಅಲ್ಲದೆ ಸರ್ಕಾರದ ಪರಬಾರೆ ನಡೆಸುವಾಗ ಕೂಡ ಈ ರೀತಿ ಜಮೀನಿನ ಸರ್ವೆ ಮಾಡಿಸಲೇಬೇಕು. ಭೂಮಾಪನ ಇಲಾಖೆ ಅಧಿಕಾರಿಗಳು ನಿಮ್ಮ ಅರ್ಜಿ ಆಹ್ವಾನಿಸಿ ನಿಮ್ಮ ಜಮೀನಿಗೆ ಸರ್ವೆ ಮಾಡಲು ಬಂದಾಗ ನೀವು ಆ ಜಾಗದಲ್ಲಿ ಹಾಜರಿರಲೇಬೇಕು.
ಜೊತೆಗೆ ಅಕ್ಕಪಕ್ಕದ ಜಮೀನಿನವರು ಅಥವಾ ಜಾಗದವರು ಇದ್ದರೆ ಇನ್ನೂ ಉತ್ತಮ. ಈ ರೀತಿ ಭೂಮಿಯನ್ನು ಸರ್ವೇ ಮಾಡಲು ಎರಡು ರೀತಿಯ ವಿಧಾನಗಳನ್ನು ಕರ್ನಾಟಕದಲ್ಲಿ ಅನುಸರಿಸುತ್ತಾರೆ. ಒಂದು ಕಬ್ಬಿಣದ ಸರಪಳಿಗಳ ಮೂಲಕ ಅಳತೆ ಮಾಡುವ ವಿಧಾನ ಮತ್ತೊಂದು ಪ್ಲೈನ್ ಟೇಬಲ್ ವಿಧಾನ ಈ ಎರಡು ವಿಧಾನಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಸರಪಳಿ ವಿಧಾನ ಎಂದರೆ 30 ಅಡಿ ಉದ್ದವುಳ್ಳ ಗುಣಮಟ್ಟದ ಕಬ್ಬಿಣದ ಕೊಂಡಿಗಳಿಂದ ತಯಾರಿಸಿದ ಕಬ್ಬಿಣದ ಸರಪಳಿಯ ಸಲಹೆದಿಂದ ಜಮೀನಿನ ಗಡಿಯಲು ಸರ್ವೆ ಮಾಡಲಾಗುತ್ತದೆ. ಈ ಸರಪಳಿಯ ಮದ್ಯ ಕಬ್ಬಿಣದ ಹಿತ್ತಾಳೆ ಕೊಂಡಿ ಕೂಡ ಇರುತ್ತದೆ ಇದನ್ನು ಎಂಟಾಣೆ ಎಂದು ಕರೆಯುತ್ತಾರೆ. ಜಮೀನಿನ ಟಿಪ್ಪಣಿಯು ನೀವು ಭೂಮಾಪನ ಅಧಿಕಾರಿಗಳಿಗೆ ಕೊಡಬೇಕಾದ ಒಂದು ದಾಖಲೆ ಆಗಿರುತ್ತದೆ.
ನೀವು ಕೊಟ್ಟ ಜಮೀನಿನ ಟಿಪ್ಪಣಿ ಸಹಾಯದಿಂದ ಅವರು ನಾಲ್ಕು ಗಡಿಗಳನ್ನು ಗುರುತಿಸಿ ಕಬ್ಬಿಣದ ಸರಪಳಿಗಳಿಂದ ಅಳತೆ ಮಾಡಿ ಸ್ಕೆಚ್ ತಯಾರಿಸಿ ಕೊಡುತ್ತಾರೆ. ಈ ರೀತಿ ಜಮೀನಿನ ಟಿಪ್ಪಣಿ ನೋಡಿ ಕಬ್ಬಿಣದ ಸರಪಳಿಗಳಿಂದ ಅಳತೆ ಮಾಡಿ ಭೂಮಾಪನ ಇಲಾಖೆ ಕಡೆಯಿಂದ ಸರ್ವೇ ಮಾಡಿಕೊಟ್ಟ ದಾಖಲೆಯು ಹೆಚ್ಚು ನಿಖರ ಮಾಹಿತಿ ಹೊಂದಿರುತ್ತದೆ ಎಂದೇ ಇದುವರೆಗೂ ನಂಬಲಾಗಿದೆ.
ಪ್ಲೇನ್ ಟೇಬಲ್ ವಿಧಾನ ಸಹ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಆದರೆ ಬೆಳಗಾವಿ ಭಾಗದಲ್ಲಿ ಮಾತ್ರ ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಜಮೀನಿನ ಮಧ್ಯದಲ್ಲಿ ಟೇಬಲ್ ಇಟ್ಟು ಕೈವಾರ, ಟೆಲಿಸ್ಕೋಪ್ ಮತ್ತು ಕ್ಯಾಲಿಕೆಟ್ ಸಹಾಯದಿಂದ ಸ್ಕೆಚ್ ತಯಾರಿಸಲಾಗುತ್ತದೆ. ಜಮೀನಿನ ಟಿಪ್ಪಣಿ ಸಹಾಯದಿಂದ ನಾಲ್ಕು ಗಡಿಗಳಲ್ಲಿ ಮೊಳೆ ಹೊಡೆದು ಅದರ ಮೂಲಕ ಲೆಕ್ಕಾಚಾರ ಹಾಕಿ ಈ ರೀತಿ ಸರ್ವೇ ಮಾಡಲಾಗುತ್ತದೆ.
ಆದರೆ ಇದು ಸರಪಳಿ ಮೂಲಕ ಮಾಡಿದ ಸರ್ವೆ ಮಾಡಿದಷ್ಟು ನಿಖರ ಮಾಹಿತಿ ಹೊಂದಿರುವುದಿಲ್ಲ ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯ. ಈ ಸಮಯದಲ್ಲೂ ಸಹ ಜಮೀನಿನ ಮಾಲೀಕ ಸ್ಥಳದಲ್ಲಿ ಇರಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿಯದಲ್ಲಿರುವ ಭೂಮಾಪನ ಇಲಾಖೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.