ಈಗಾಗಲೇ ರೈತನಿಗೆ ಸಾಕಷ್ಟು ಸಮಸ್ಯೆಗಳಿವೆ, ಇದರ ಜೊತೆಗೆ ಜಮೀನಿನ ವ್ಯಾಜ್ಯ (despute) ಕೂಡ ಒಂದು. ಸರ್ವೇ ನಂಬರ್ ಗಳ ವ್ಯತ್ಯಾಸವಾಗಿರುವದರಿಂದಲೇ ರಾಜ್ಯದ ಅದೆಷ್ಟೋ ರೈತರು ತಮ್ಮ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಅದನ್ನು ಬಿಟ್ಟು ಕಚೇರಿಗಳಿಗೆ ತಿರುಗುವಂತಾಗಿದೆ.
ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಇಚ್ಛಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು (Karnataka Government) ಮರು ಸರ್ವೇ (Re-Servey) ಪರಿಹಾರವೆಂದು ಭಾವಿಸಿದೆ ಮತ್ತು ಕಂದಾಯ ಇಲಾಖೆಯು (Revenue department) ಈಗಾಗಲೇ ಈ ಪರಿಹಾರ ಮಾರ್ಗ ಅನುಸರಿಸಿ ಕಾರ್ಯಪ್ರವೃತ್ತವಾಗಿದೆ.
ನವೆಂಬರ್ 15ರಂದೇ ಈ ಕಾರ್ಯಕ್ರಮದ ಪ್ರಾಯೋಗಿಕ ಪರೀಕ್ಷೆಗೆ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಚಾಲನೆ ನೀಡಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಈ ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಿ ಸುದ್ದಿಗೋಷ್ಠಿ ಜೊತೆ ಮಾತನಾಡಿದ ಸಚಿವರು ಈ ನಿರ್ಧಾರ ಹಿಂದಿರುವ ಉದ್ದೇಶಗಳ ಕುರಿತು ಮಾತನಾಡಿದ್ದಾರೆ.
ಸರ್ವೇ ನಂಬರ್ ವ್ಯಾಜ್ಯ ಎಂಬುದು ಇತ್ತೀಚೆಗೆ ರೈತರ ಪಾಲಿನ ಸಾಮಾನ್ಯ ಸಮಸ್ಯೆಯಾಗಿದೆ, ತಮ್ಮದಲ್ಲದ ತಪ್ಪಿಗೆ ದಿನಂಪ್ರತಿ ಸರಕಾರಿ ಕಚೇರಿಯನ್ನು ಅಲೆಯುವಂತಾಗಿದೆ ರೈತರ ಈ ಪರಿಸ್ಥಿತಿಗೆ ಸರ್ವೇ ಇಲಾಖೆಯಲ್ಲಿನ ಸಮಸ್ಯೆಯೆ ಕಾರಣ ಎಂದು ರೈತರ ಪರಿಸ್ಥಿತಿಗೆ ಮರುಗಿದ ಸಚಿವರು ಬ್ರಿಟೀಷರ ಕಾಲದಲ್ಲಿ 1925 ರಲ್ಲಿ ನಡೆದ ನೂರು ವರ್ಷಗಳ ಹಿಂದಿನ ಭೂ ಸರ್ವೇಯನ್ನೇ ಆಧಾರವಾಗಿ ಇಟ್ಟುಕೊಂಡು ನಾವು ಈಗಲೂ ವ್ಯವಹಾರ ನಡೆಸುತ್ತಿದ್ದೇವೆ.
ಇದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಇದೆಲ್ಲದರ ಪರಿಹಾರ ಎಂದು ಚಿಂತನೆ ಮಾಡಿ ಭೂ ಮರು ಸರ್ವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಇದು ಆರಂಭ ಈ ಕಾರ್ಯ ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲ ಕೃಷಿ ಮತ್ತು ಅರಣ್ಯ ಭೂಮಿಯನ್ನು ಇದೇ ಮಾದರಿಯಲ್ಲಿ ರೀ ಸರ್ವೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಬಳಿ ಪ್ರತಿ ಹಳ್ಳಿಯ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ನೂರು ವರ್ಷಗಳ ಹಳೆಯ ದಾಖಲೆ ಇದೆ, ಆದರೆ ಈ ನೂರು ವರ್ಷದಲ್ಲಿ ಅದೆಷ್ಟೋ ಖುಷಿ ಹಾಗೂ ಜನವಸತಿರಹಿತ ಪ್ರದೇಶಗಳು ಕೃಷಿ ಮತ್ತು ಜನವಸತಿ ಪ್ರದೇಶಗಳಾಗಿ ಪರಿವರ್ತನೆ ಹೊಂದಿವೆ.
ಪ್ರತಿಯೊಂದು ಗ್ರಾಮ ಠಾಣಾ ಹಾಗೂ ಸರ್ವೇ ನಂಬರ್ ಗಡಿಯಲ್ಲೂ ಬಹಳಷ್ಟು ವ್ಯತ್ಯಾಸಗಳಾಗಿರುವುದು ಕಂಡು ಬಂದಿದೆ ಆದರೆ ಇದೆಲ್ಲದರ ಬಗ್ಗೆ ಸರಕಾರಿ ದಾಖಲೆಗಳಲ್ಲಿ ನಿಖರ ವಿವರಣೆ ಇಲ್ಲ ಭೂ ಮರು ಸರ್ವೆ ಕಾರ್ಯ ನಡೆದರೆ ಇದಕ್ಕೆಲ್ಲ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.
ಇದಲ್ಲದೆ, ಸರಕಾರಿ ಭೂ ಒತ್ತುವರಿ ಜಮೀನು ಯಾವುದು? ಹಾಗೂ ಅರಣ್ಯ ಪ್ರದೇಶದ ಗಡಿಯ ಬಗ್ಗೆಯೂ ಸಾಕಷ್ಟು ಗೊಂದಲ ಇದೆ. ಈ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿಯೆ ಇದೀಗ ತಾಂತ್ರಿಕ ಭೂ ಮರು ಸರ್ವೇಗೆ ಚಾಲನೆ ನೀಡಿರುವುದು. ಡ್ರೋನ್ ತಂತ್ರಜ್ಞಾನದ (drone technology) ಮೂಲಕ ಭೂ ರೀ ಸರ್ವೆ ನಡೆಸಲಾಗುತ್ತಿದೆ.
ಡ್ರೋನ್ ಪ್ರತಿ ಚ.ಕಿಲೊಮೀಟರ್ ಗೂ 4 ಸಾವಿರಕ್ಕೂ ಅಧಿಕ ಫೋಟೊ ತೆಗೆಯುತ್ತದೆ, ಆ ಫೋಟೊಗಳ ಆಧಾರದಲ್ಲಿ ವೈಜ್ಞಾನಿಕವಾಗಿ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳನ್ನು ಗುರುತಿಸಲಾಗುವುದು. ಈ ಮೂಲಕ ರೈತರ ಸರ್ವೇ ವ್ಯಾಜ್ಯಗಳ ಶಾಶ್ವತ ಪರಿಹಾರ ಸಿಗುತ್ತದೆ ಮತ್ತು ಸರಕಾರಿ ಭೂಮಿ ಒತ್ತುವರಿಯಾಗುತ್ತಿರುವುದನ್ನು ಗುರುತಿಸಿ ಒತ್ತುವರಿ ತೆರವು ಮಾಡಲು ಈ ಭೂ ರೀ ಸರ್ವೆ ಸಹಕಾರಿಯಾಗಲಿದೆ ಎಂದು ಸಚಿವರು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.