ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿ ಮೀಸಲಾಗಿದೆ.
ಇದರೊಂದಿಗೆ ಗ್ಯಾರಂಟಿಯೇತರವಾಗಿ ಕೂಡ ಹೆಣ್ಣು ಮಕ್ಕಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಕೈಗೊಂಡಿರುವ ಸರ್ಕಾರವು ಶುಚಿ ಯೋಜನೆಯಡಿ ವಿಶೇಷ ಕಾರ್ಯಕ್ರಮಕ್ಕೆ ಶಕ್ತಿ ದೇವತೆಯನ್ನು ಸಂಭ್ರಮಿಸುವ ಈ ನವರಾತ್ರಿ ಸುಸಮಯದಲ್ಲಿ ನಾಂದಿ ಹಾಡಿದೆ. ಶುಚಿ ಯೋಜನೆ ಬಗ್ಗೆ ಬಹುತೇಕ ಅನೇಕರಿಗೆ ತಿಳಿದಿದೆ.
ಈ ಯೋಜನೆಯಡಿ ಸರ್ಕಾರಿ ಶಾಲಾ ಕಾಲೇಜು ಹಾಗೂ ಸರ್ಕಾರಿ ವಸತಿ ನಿಲಯಗಳಲ್ಲಿರುವ ಹೆಣ್ಣು ಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವ ಸಲುವಾಗಿ ಮುಟ್ಟಿದ ದಿನಗಳಲ್ಲಿ ಅವಶ್ಯಕವಾಗಿ ಬೇಕಾಗಿರುವ ಸಾಮಗ್ರಿಗಳಾದ ಸ್ಯಾನಿಟರಿ ಪ್ಯಾಡ್ ಹಾಗೂ ಕಪ್ಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು.
ಈಗ ಈ ಯೋಜನೆಗೆ ಹೊಸ ರೂಪ ನೀಡಿ ಇದನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ. ಗ್ರಾಮೀಣ ಭಾಗವು ಸೇರಿದಂತೆ ರಾಜ್ಯದ ಎಲ್ಲಾ 10 ವರ್ಷದಿಂದ 18 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ಅರಿವು ಮೂಡಿಸಿ ಆ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕಾದ ಬೇಕಾದ ಪರಿಕರವನ್ನು ಉಚಿತವಾಗಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತಲುಪಿಸುವ ಮತ್ತು ಅವರಿಂದ ಸ್ವಚ್ಛತೆ ಬಗ್ಗೆ ತರಬೇತಿ ಕೊಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನವಶಕ್ತಿ ಸಂಭ್ರಮ ಎನ್ನುವ ಹೆಸರಿನೊಂದಿಗೆ ಇದನ್ನು ಪರಿಚಯಿಸುತ್ತಿದೆ.
ಇನ್ನು ಕೂಡ ನಮ್ಮ ರಾಜ್ಯದಲ್ಲಿ ಹಳ್ಳಿಗಳ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಕಾರಣದಿಂದ ಮತ್ತು ಕೆಲವು ಮೌಢ್ಯ ಆಚರಣೆಗಳ ಕಾರಣದಿಂದ ಋತುಸ್ತ್ರಾವದ ದಿನಗಳಲ್ಲಿ ಅಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಇದರಿಂದ ಅನೇಕ ಸೋಂಕುಗಳಿಗೆ ಗುರಿಯಾಗಿ ಮಾರಣಾಂತಿಕ, ಕಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ.
ಹಾಗಾಗಿ ಇಂತಹ ಮೂಢನಂಬಿಕೆಗಳಿಂದ ಹೆಣ್ಣು ಮಕ್ಕಳನ್ನು ಆಚೆ ತಂದು ಅವರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಬೇಕಾದ ಅನುಕೂಲತೆ ಮಾಡಿ ಕೊಟ್ಟು ನಿಶ್ಚಿಂತೆಯಾಗಿ ಶಾಲಾ ಕಾಲೇಜಿಗೆ ತೆರಳುವಂತೆ ಮಾಡಿ ಆ ಮೂಲಕ ಶೈಕ್ಷಣಿಕವಾಗಿ ಅವರನ್ನು ಸದೃಢಗೊಳಿಸಿ ಭವ್ಯ ಭವಿಷ್ಯದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ಮಹತ್ವವಾಗಿಸುವ ದೂರಲೋಚನೆಯಿಂದ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ.
ಈ ವಿಶೇಷ ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ ನವಶಕ್ತಿ ಸಂಭ್ರಮ ”
ಶುಚಿ ಯೋಜನೆಯಡಿ 10 ರಿಂದ 18 ವಯೋಮಾನದ 19 ಲಕ್ಷದ 27 ಸಾವಿರ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಹಂಚಿಕೆ ಮಾಡಲು ಪ್ರಸಕ್ತ ಸಾಲಿನಲ್ಲಿ ರೂ. 47 ಕೋಟಿ ಅನುದಾನ ನೀಡಿದ್ದು, ವೈಯಕ್ತಿಕ ಸ್ವಚ್ಚತೆಯ ಮೂಲಕ ದೈಹಿಕ ಆರೋಗ್ಯ ವೃದ್ಧಿಸಿ, ಶೈಕ್ಷಣಿಕ ಸಾಧನೆಗೆ ಈ ಯೋಜನೆಯು ನೆರವಾಗಲಿದೆ.
ಹೆಣ್ಣೊಂದು ಕಲಿತರೆ… pic.twitter.com/421uzL8Lev— Laxmi Hebbalkar (@laxmi_hebbalkar) October 23, 2023
ಶುಚಿ ಯೋಜನೆಯಡಿ 10 ರಿಂದ 18 ವಯೋಮಾನದ 19 ಲಕ್ಷದ 27,000 ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಹಂಚಿಕೆ ಮಾಡಲು ಪ್ರಸಕ್ತ ಸಾಲಿನಲ್ಲಿ ರೂ. 47 ಕೋಟಿ ಅನುದಾನ ನೀಡಿದ್ದು, ವೈಯುಕ್ತಿಕ ಸ್ವಚ್ಛತೆಯ ಮೂಲಕ ದೈಹಿಕ ಆರೋಗ್ಯ ವೃದ್ಧಿಸಿ ಶೈಕ್ಷಣಿಕ ಸಾಧನೆಗೆ ಈ ಯೋಜನೆಯು ನೆರವಾಗಲಿದೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿನ ಮಹತ್ವ ನಮಗೆ ತಿಳಿದಿದೆ, ನಾಡಿನ ಪ್ರತಿ ಹೆಣ್ಣು ಮಕ್ಕಳು ಗರಿಷ್ಠ ಶಿಕ್ಷಣ ಪಡೆದು ಕುಟುಂಬದ ಮತ್ತು ಸಮಾಜದ ಆಸ್ತಿಯಾಗಬೇಕೆಂಬ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಸ್ತ್ರೀ ಶಕ್ತಿ ಆರಾಧನೆಯ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದು, ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಎಂದು ಪೋಸ್ಟ್ ಹಾಕಿ ವಿಷಯ ಹಂಚಿಕೊಂಡಿದ್ದಾರೆ.