ಇನ್ನು ಆರು ತಿಂಗಳ ಒಳಗಾಗಿ ಕೃಷಿ ಪಂಪ್ ಸೆಟ್ ಗಳ R.R ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ರೈತರು ಲಿಂಕ್ ಮಾಡಲೇಬೇಕು. ಇಲ್ಲವಾದಲ್ಲಿ ಅಂತಹ ರೈತರಿಗೆ ಸಹಾಯಧನವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಬಂದ್ ಮಾಡಲಾಗುವುದು ಎನ್ನುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (KERC) ನೀಡಿದೆ.
ಈ ಸುದ್ದಿಯನ್ನು ಕೇಳಿ ಕರ್ನಾಟಕದ ರೈತರು ಕಂಗಲಾಗಿ ಹೋಗಿದ್ದಾರೆ. ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಇದಕ್ಕೆ ಕೊಡುತ್ತಿರುವ ಕಾರಣ ಏನೆಂದರೆ, ಕರ್ನಾಟಕದಲ್ಲಿ ಈ ರೀತಿ ಕೃಷಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿರುವ ವಿದ್ಯುಚ್ಛಕ್ತಿಯ ಪ್ರಮಾಣದ ಸರಿಯಾದ ಅಂಕಿ ಅಂಶವೇ ಇಲ್ಲ. ಜೊತೆಗೆ ಕೃಷಿ ಹೆಸರು ಹೇಳಿಕೊಂಡು ಅನೇಕರು ಅಕ್ರಮವಾಗಿ ಬೇರೆ ಕೆಲಸಗಳಿಗೆ ಈ ಉಚಿತ ವಿದ್ಯುತ್ ಸೌಲಭ್ಯವನ್ನು ಬಳಸಿಕೊಳ್ಳುವ ಅನುಮಾನವೂ ಇದೆ.
ಹಾಗಾಗಿ ರೈತರ ಆಧಾರ್ ಸಂಖ್ಯೆಗೆ ರೈತನ ಪಂಪ್ ಸೆಟ್ ನ R.R ಸಂಖ್ಯೆ ಲಿಂಕ್ ಆದರೆ ಇದಕ್ಕೆ ಕಡಿವಾಣ ಬೀಳುತ್ತದೆ ಎನ್ನುವುದು ವಿದ್ಯುತ್ ಇಲಾಖೆಯ ನಿಲುವು. ರೈತ ವಲಯ ಈ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದೆ. ರೈತರು ಕೊಡುತ್ತಿರುವ ಕಾರಣ ಏನೆಂದರೆ ಒಬ್ಬ ರೈತನು ತುಂಡು ಭೂಮಿಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ.
ಹಾಗಾಗಿ ಆತ ಬೇರೆ ಬೇರೆ ಜಾಗದಲ್ಲಿ ಪಂಪ್ ಸೆಟ್ ಗಳನ್ನು ಹೊಂದಿದ್ದಾಗ ಅವುಗಳ R.R ಸಂಖ್ಯೆ ಬೇರೆ ಆಗಿರುತ್ತದೆ ಆದರೆ ರೈತ ಒಬ್ಬನೇ ಆಗಿರುವುದರಿಂದ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದಾಗ ಅದು ಮಾನ್ಯವಾಗದೆ ಹೋಗಬಹುದು ಎನ್ನುವ ಅನುಮಾನ ರೈತ ವರ್ಗಕ್ಕೆ, ಜೊತೆಗೆ ಕೆಲವೊಮ್ಮೆ ಒಂದೇ ಜಮೀನಿಗೆ ನಾಲ್ಕೈದು ಕೊಳವೆ ಬಾವಿಗಳನ್ನು ತೆರೆಸಿರುವ ಸಾಧ್ಯತೆ ಇರುತ್ತದೆ ಹಾಗಾಗಿ ಇವುಗಳಿಗೆ ಕೂಡ ಕಡಿವಾಣ ಹಾಕುವ ಹುನ್ನಾರವನ್ನು ವಿದ್ಯುತ್ ಇಲಾಖೆ ಮಾಡಿದೆ ಎನ್ನುವ ಆರೋಪ ರೈತರು ಕಡೆಯಿಂದ ಕೇಳಿ ಬರುತ್ತಿದೆ.
ಉಚಿತ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ನೀಡಿ ಹಣ ಪಡೆಯುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಅನುಮಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇದು ಸಣ್ಣ ಹಿಡುವಳಿದಾರರ ಅಹವಾಲು ಆದರೆ ಇದರಿಂದ ಮತ್ತೊಂದು ವರ್ಗಕ್ಕೆ ಇನ್ನೂ ದೊಡ್ಡ ಹೊರೆ ಬೀಳಲಿದೆ.
ಯಾಕೆಂದರೆ ನೂರಾರು ಎಕರೆ ಪಂಪ್ ಸೆಟ್ ಭೂಮಿಯನ್ನು ಹೊಂದಿರುವ ಶ್ರೀಮಂತ ವರ್ಗ ಮತ್ತು ಬೇನಾಮಿ ಆಸ್ತಿ ಮಾಡಿರುವ ಉದ್ಯಮಿಗಳು ಮತ್ತು ರಾಜಕೀಯ ವ್ಯಕ್ತಿಗಳಿಗೂ ಕೂಡ ಈ ನಿಯಮ ಅಡವಳಿಕೆ ಆದಾಗ ಸಮಸ್ಯೆ ತಲೆತೋರಲಿದೆ ಅವರ ಜಮೀನಿಗೆ ಉಚಿತವಾಗಿ ಹರಿಯುತ್ತಿರುವ ವಿದ್ಯುತ್ ಗೆ ಕಡಿತ ಬಿದ್ದರೂ ಬೀಳಬಹುದು. ಹೀಗಾಗಿ ಈ ನಿರ್ಧಾರ ಸರಿಯೋ ತಪ್ಪು ಎನ್ನುವ ಗೊಂದಲದಲ್ಲಿ ಎಲ್ಲರೂ ಇದ್ದಾರೆ.
ಸದ್ಯಕ್ಕೀಗ ವಿದ್ಯುತ್ ಇಲಾಖೆ ವತಿಯಿಂದ ಕಟ್ಟುನಿಟ್ಟಾಗಿ ಈ ಆದೇಶ ಹೊರ ಬಿದ್ದಿದೆ ಹಾಗೆ ರೈತ ಸಂಘಗಳು ಕೂಡ ಇದನ್ನು ಬಲವಂತವಾಗಿ ಜಾರಿಗೆ ತಂದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಮಧ್ಯಸ್ಥಿಕೆ ವಹಿಸಿದರೆ ಸಮಸ್ಯೆ ಸರಿಹೋಗಲೂ ಬಹುದು.
ಆದರೆ ಈ ಬಗ್ಗೆ ಇನ್ನೂ ಕೂಡ ಸರ್ಕಾರ ಯಾವುದೇ ವಿಷಯವನ್ನು ಪ್ರಸ್ತಾಪಿಸಿಲ್ಲ ಕಾಲವಕಾಶ ಇನ್ನೂ ಇರುವುದರಿಂದ ಮುಂದೆನಾಗುತ್ತದೆ ಕಾದು ನೋಡೋಣ. ವಿದ್ಯುತ್ಛಕ್ತಿ ನಿಯಂತ್ರ ಆಯೋಗ ಹೇರಿರುವ ಈ ಹೊಸ ನಿಯಮ ಸರಿಯೋ ತಪ್ಪೋ ಎನ್ನುವ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.