PTCL Act ಎಂದರೆ ಜಮೀನು ಪರಿಭಾರೆ ನಿಷೇಧ ಮಸೂದೆ ಎಂದರ್ಥ. ಹಲವು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದ ಈ ವಿಷಯಕ್ಕೆ ಇತ್ತೀಚೆಗೆ ಜುಲೈ 18ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಸಿಕ್ಕಿದೆ. ಬಹುಮತದ ಒಪ್ಪಿಗೆಯೊಂದಿಗೆ ತೀರ್ಮಾನವಾಗಿ ಈ ಮಸೂದೆ ತಿದ್ದುಪಡಿಯಾಗಿದೆ.
ಇದರಲ್ಲಿರುವ ಪ್ರಮುಖ ಅಂಶ ಏನೆಂದರೆ, ಇನ್ನು ಮುಂದೆ ಸರ್ಕಾರವು ದೀನ ದಲಿತರಿಗಾಗಿ ಮಂಜೂರು ಮಾಡಿರುವ ಸರ್ಕಾರಿ ಭೂಮಿಯನ್ನು ಯಾರು ಖರೀದಿಸುವಂತಿಲ್ಲ ಹಾಗೂ ಸ್ವತಃ ಸರ್ಕಾರದಿಂದ ಈ ಭೂಮಿಗಳನ್ನು ಮಂಜೂರು ಮಾಡಿಸಿಕೊಂಡ ಫಲಾನುಭವಿಯು ಕೂಡ ಇದನ್ನು ಸುಲಭವಾಗಿ ಮಾರುವುದಕ್ಕೆ ಸಾಧ್ಯವಿಲ್ಲ ಎನ್ನುವುದು. ಇಂತಹದೊಂದು ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಹಾಗೂ ಇನ್ನುಳಿದ ದಮನಿತ ವರ್ಗಕ್ಕೆ ಸರ್ಕಾರವು ಉಚಿತವಾಗಿ ಜಮೀನು ಮಂಜೂರು ಮಾಡಿಕೊಟ್ಟು ಅವರು ಸಹ ಅದರಲ್ಲಿ ಕೃಷಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ನೆಮ್ಮದಿಯಾಗಿ ಜೀವನ ಕಳೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲ ಕಾರಣಗಳಲ್ಲಿ ಸ್ವತಃ ಫಲಾನುಭವಿಯೇ ಇದನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದರೆ ಇನ್ನೂ ಕೆಲವು ಪ್ರಕರಣಗಳಲ್ಲಿ ಬಲವಂತವಾಗಿ ಈ ಜಮೀನಿನ ಹಕ್ಕನ್ನು ಅವರುಗಳಿಂದ ಕಸಿದುಕೊಳ್ಳಲಾಗುತ್ತಿದೆ.
ಅವರ ಮುಗ್ಧತೆ, ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು ಆಸ್ತಿಗಳನ್ನು ಅಡಮಾನ ಮಾಡಿಕೊಂಡು ಹೊಂಚು ಹಾಕಿ ಉಳ್ಳವರು ಕಬಳಿಸಿದ್ದಾರೆ. ಆಸ್ತಿ ಕಳೆದುಕೊಂಡ ಇವರು ಮತ್ತೆ ಸರ್ಕಾರದಿಂದ ಜಮೀನು ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರವು ಇಂತಹದೊಂದು ಕಾಯ್ದೆಯನ್ನು ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿ ಅವರ ಬಳಿಯೇ ಉಳಿಯಬೇಕು ಎನ್ನುವ ಉದ್ದೇಶದಿಂದಲೇ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿನಿಯಮ 1978ಕ್ಕೆ ತಿದ್ದುಪಡಿ ತರಲಾಗಿದೆ. ಸದರಿ ಕಾಲಂ 4(2) ರಂತೆ ಒಂದು ವೇಳೆ ಇವರು ಜಮೀನು ಮಾರಾಟ ಮಾಡಲು ನಿರ್ಧರಿಸಿದರೆ ವಿಷಯವನ್ನು ಸರ್ಕಾರದ ಪ್ರಸ್ತಾಪಿಸಿ ಪೂರ್ವನುಮತಿ ಪಡೆಯಬೇಕು ಎನ್ನುವುದು ಕಡ್ಡಾಯವಾಗಿದೆ.
ಇದರಿಂದಾಗಿ ಸರ್ಕಾರದ ಅನುಮತಿ ಪಡೆಯದೆ ಬೇಕಾಬಿಟ್ಟಿ ಮಾರಾಟವಾಗುತ್ತಿದ್ದ ಪರಭಾರೆಗೆ ತಡೆ ಬೀಳಲಿದೆ. ಪರೋಕ್ಷವಾಗಿ ದೀನ ದಲಿತರ ಜಮೀನನ್ನು ಕಸಿದುಕೊಳ್ಳುವ ಉಳ್ಳವರ ಪ್ರವೃತ್ತಿಗೆ ಈ ಕಾಯ್ದೆ ತಿದ್ದುಪಡಿ ಕಡಿವಾಳ ಹಾಕಲಿದೆ. ಈ ಸದುದ್ಧೇಶದಿಂದ ಸರ್ಕಾರ ಈಗ ವರ್ಷಗಳ ಬೇಡಿಕೆಯಾಗಿದ್ದ PTCL ಕಾಯ್ದೆಗೆ ತಿದ್ದುಪಡಿ ತಂದಿದೆ.
ಈವರೆಗೆ ಸರ್ಕಾರದಿಂದ ದಲಿತರಿಗೆ ಮಂಜೂರಾಗಿರುವ ಜಮೀನುಗಳ ಪೈಕಿ 4ಲಕ್ಷ ಎಕರೆಷ್ಟು ಭೂಮಿಯು ಪರಾಭಾರೆಯಾಗಿದೆ. 50,000 ಪ್ರಕರಣಗಳು ಕೆಳಹಂತದ ನ್ಯಾಯಾಲಯದಲ್ಲಿ ವಜಾ ಆಗಿವೆ. ಈ 50,000 ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 25,000 ಪ್ರಕರಣಗಳು ವಜಾ ಆಗಿವೆ ಎನ್ನುವುದು ಉಲ್ಲೇಖಾರ್ಹ ಅಂಶ. ಈ ಪ್ರಕರಣಗಳಲ್ಲಿ ದಲಿತರಿಗೆ ಅವರು ಕಳೆದುಕೊಂಡ ಆಸ್ತಿ, ಮತ್ತೆ ಸಿಗುತ್ತಿಲ್ಲ.
ಇನ್ನು ಉಳಿದ 50,000 ಪ್ರಕರಣಗಳು ವಿಚಾರಣೆಯ ಹಂತದಲ್ಲಿದೆ. ಮೂಲ ಮಂಜೂರಾತಿದಾರ ಅಥವಾ ಅವರ ಉತ್ತರಾಧಿಕಾರಿಗಳು ಸರ್ಕಾರದ ಮುಂದೆ ಅರ್ಜಿ ಹಾಕಿ ಹಕ್ಕುಮರುಸ್ಥಾಪನೆ ಮಾಡಿಕೊಳ್ಳಲು ಕೂಡ ತಿದ್ದುಪಡಿ ಆಗಿರುವ ಕಾಯ್ದೆಯು ಈಗ ಅವಕಾಶ ಮಾಡಿಕೊಡಲಿದೆ.
ಅಂತಿಮವಾಗಿ ಕಾಯ್ದೆಯ ತಿದ್ದುಪಡಿಯಿಂದ ನಿಜವಾಗಿಯೂ ಸಂತ್ರಸ್ತರಾಗಿದ್ದ ಸರ್ಕಾರದಿಂದ ಜಮೀನು ಪಡೆದಿದ್ದ ಮೂಲ ಮಂಜೂರಾತಿದಾರರಿಗೆ ನ್ಯಾಯ ಸಿಕ್ಕಂತಾಗಿದೆ. ಹಾಗಾಗಿ ಇನ್ನು ಮುಂದೆ ಜಮೀನು ಖರೀದಿಸುವ ಮುನ್ನ ಜಮೀನಿನ ಮೂಲ ದಾಖಲೆ ಪರಿಶೀಲನೆ ಮಾಡಿ ಕಾನೂನಿನ ನೆರವು ಪಡೆಯುವುದು ನಂತರ ಮುಂದುವರೆಯುವುದು ಉತ್ತಮ.