ನಮ್ಮಲ್ಲಿ ಹಲವಾರು ಜನರಿಗೆ ಈ ಸಮಸ್ಯೆ ಆಗಿದೆ. ಶಾಲೆ ದಾಖಲೆಗಳಲ್ಲಿ ಇರುವ ಮಾಹಿತಿಗೂ ಅಂಕಪಟ್ಟಿಯಲ್ಲಿ ಇರುವ ಮಾಹಿತಿಗೂ ವ್ಯತ್ಯಾಸಗಳಾಗಿರುತ್ತವೆ. ಹೆಸರಿನಲ್ಲಿ ವ್ಯತ್ಯಾಸ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್, ತಂದೆ-ತಾಯಿ ಹೆಸರು ತಪ್ಪಾಗಿರುವುದು, ತಪ್ಪಾದ ಜಾತಿ ಎಂಟ್ರಿ ಆಗಿರುವುದು ಇನ್ನೂ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಮುಂದೊಂದು ದಿನ ಸರ್ಕಾರಿ ಹುದ್ದೆ ಪಡೆಯುವಾಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ವೆರಿಫಿಕೇಶನ್ ಬಂದಾಗ ಈ ರೀತಿ ವ್ಯತ್ಯಾಸಗಳು ಕಂಡು ಬಂದರೆ ನಾವು ಆ ಹುದ್ದೆಗೆ ಅರ್ಹರಾಗಿದ್ದರು ಕೂಡ ಸರ್ಕಾರಿ ಉದ್ಯೋಗ ದಕ್ಕುವುದಿಲ್ಲ. ಹಾಗಾಗಿ ಎಲ್ಲ ದಾಖಲೆಗಳಲ್ಲೂ ಮಾಹಿತಿ ಸರಿಯಾಗಿ ಇರಬೇಕಾದದ್ದು ಮುಖ್ಯ. ಇದರ ಬಗ್ಗೆ ಆಕ್ಷೇಪಣೆ ಇದ್ದ ಕಾರಣ 2015ರಲ್ಲಿ ಸಮಿತಿ ಒಂದು ರಚನೆ ಆಗಿರುವ ಬಗ್ಗೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿತ್ತು.
ಈಗ ಆ ಸುತ್ತೋಲೆಗಳಲ್ಲಿ ಕೆಲವು ವಿಷಯಗಳನ್ನು ತೆಗೆದುಹಾಕಿ ಮತ್ತು ಕೆಲವು ಪ್ರಮುಖವಾದ ವಿಷಯಗಳನ್ನು ಸೇರಿಸಿ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶ ನೀಡಿರುವ ಬಗ್ಗೆ ಹಾಗೂ ಅದಕ್ಕೆ ಇರುವ ಮಾರ್ಗಸೂಚಿಯನ್ನು ತಿಳಿಸಿ ಮತ್ತೊಂದು ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ ಅದರಲ್ಲಿ ಇರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● 1ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಕ್ಯಾಲೆಂಡರ್ ಅಲ್ಲಿ ಇಲ್ಲದೆ ಇರುವ ದಿನಾಂಕಗಳು ಉದಾಹರಣೆಗೆ ಫೆಬ್ರವರಿ 30, ಜೂನ್ 31 ಇಂತಹ ದಿನಾಂಕ ನಮೂದು ಆಗಿದ್ದರೆ ಇದರ ತಿದ್ದುಪಡಿಗಳಿಗೆ ಸಲ್ಲಿಕೆ ಆಗುವ ಅರ್ಜಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರ ಹಂತದಲ್ಲಿ ಪರಿಶೀಲಿಸಿ ತಕ್ಷಣವೇ ಸಂಬಂಧಪಟ್ಟ B.E.O ಅವರಿಗೆ ಪ್ರಸ್ತಾವನೆ ಸಲ್ಲಿಸಿ ಅವರ ಅನುಮತಿ ಪಡೆದು ಶಾಲಾ ಮುಖ್ಯ ಶಿಕ್ಷಕರು ತಿದ್ದುಪಡಿ ಮಾಡುವ ಕ್ರಮವಹಿಸಲು ಸೂಚಿಸಲಾಗಿದೆ.
●SSLC ವಿದ್ಯಾರ್ಥಿಗಳ ಮಾಹಿತಿಯನ್ನು OMR ಶೀಟ್ ನಲ್ಲಿ ದಾಖಲಿಸುವಾಗ ಎಚ್ಚರಿಕೆಯಿಂದ ನಿರ್ವಹಿಸಬೇಕು, ಇಲ್ಲವಾದಲ್ಲಿ ಅವುಗಳಲ್ಲಿ ವ್ಯತ್ಯಾಸವಾದರೆ ಸಂಬಂಧ ಪಟ್ಟ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎನ್ನುವ ಎಚ್ಚರಿಕೆ ನೀಡಿದೆ.
● SSLC ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಸ್ಪೆಲ್ಲಿಂಗ್, ಇನಿಷಿಯಲ್, ಹುಟ್ಟಿದ ದಿನಾಂಕಗಳಲ್ಲಿ ತಿದ್ದುಪಡಿ ಇದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಿಸಿದ ಶಾಲೆಯ ದಾಖಲಾತಿವಹಿ ಪರಿಶೀಲಿಸಿ ನೇರವಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಿ ಕ್ರಮ ವಹಿಸುವುದು.
● ಜಾತಿ ಬಗ್ಗೆ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ, ವಿಚಾರಣೆ ನಡೆಸಿ ತೀರ್ಪು ನೀಡಲು ಸಿವಿಲ್ ಕೋಟಿಗೂ ಕೂಡ ಅವಕಾಶ ಇರುವುದಿಲ್ಲ, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆಯವರು ಅಭಿಪ್ರಾಯಿಸಿರುವುದರಿಂದ ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿ ನೀಡುವ ಆದೇಶದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿಯೇ ಪರಿಶೀಲಿಸಿ ಕ್ರಮ ವಹಿಸುವುದು.
● ವಿದ್ಯಾರ್ಥಿಗಳ ಹೆಸರು ಅಥವಾ ಜನ್ಮ ದಿನಾಂಕಕ್ಕೆ ಸಂಬಂಧಪಟ್ಟ ಹಾಗೆ ತಿದ್ದುಪಡಿಗಳು ಇದ್ದಾಗ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಐದು ವರ್ಷಕ್ಕೂ ಮುನ್ನ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವುದಿಲ್ಲ ಎನ್ನುವುದು ಗಮನದಲ್ಲಿರಬೇಕು. ಅವರು ಕೊಟ್ಟಿರುವ ದಾಖಲೆಗಳು ಇದಕ್ಕೆ ಪೂರಕವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಅವರು ನೀಡಿರುವ ದಾಖಲೆಗಳಲ್ಲಿ ವಯಸ್ಸು ಕಡಿಮೆ ಇದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಿಂದ ಡಿಕ್ರಿ ತರುವುದು ಅವಶ್ಯಕ.
● SSLC ನಂತರದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅಥವಾ ಅಂಕಪಟ್ಟಿಗಳಲ್ಲಿ ಹೆಸರು ಜನ್ಮ ದಿನಾಂಕ ಈ ರೀತಿಯ ತಿದ್ದುಪಡಿ ಬಂದಾಗ ನ್ಯಾಯಾಲಯಗಳ ಡಿಕ್ರಿ ಪಡೆದು ನ್ಯಾಯಾಲಯಗಳ ಆದೇಶದ ಮೇರೆಗೆ ಜಿಲ್ಲಾ ಉಪನಿರ್ದೇಶಕರು ಪ್ರಸ್ತಾವನೆ ಸ್ವೀಕರಿಸಿದ 15 ದಿನಗಳಾದ ಒಳಗೆ ಕ್ರಮ ವಹಿಸುವುದು.
● ತಾಯಿ ಕೂಡ ನೈಜ ಪೋಷಕರಾಗಿರುವುದರಿಂದ ಏಳನೇ ತರಗತಿ, SSLC ಮುಂತಾದ ಅಂಕಪಟ್ಟಿಗಳಲ್ಲಿ ಹೆಸರನ್ನು ಕೂಡ ನೋಂದಾಯಿಸುವುದು. ಜೊತೆಗೆ ದತ್ತು ಪ್ರಕರಣಗಳಲ್ಲಿ ನ್ಯಾಯದಗಳ ಡಿಕ್ರಿ ಪಡೆದು ನೋಂದಣಿ ದಾಖಲೆಗಳನ್ನು ಒದಗಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿಯೇ ಪರಿಶೀಲಿಸಿ ತಿದ್ದುಪಡಿಗೆ ಕ್ರಮ ಕೈಗೊಳ್ಳುವುದು ಎನ್ನುವ ಇತ್ಯಾದಿ ಪ್ರಮುಖ ಅಂಶಗಳನ್ನು ಸೇರಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ.