ತಿರುಪತಿ ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದಿವ್ಯ ಸಾನಿಧ್ಯ ಹೊಂದಿರುವಂತಹ ಕ್ಷೇತ್ರ. ಭೂ ವೈಕುಂಟ ವಾದಂತಹ ತಿರುಪತಿಗೆ ಪ್ರತಿನಿತ್ಯ ಸಹಸ್ರಾರು ಮಂದಿ ಭಕ್ತಾದಿಗಳು ಆಗಮಿಸಿ ತಿಮ್ಮಪ್ಪ ದೇವರ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಇನ್ನೂ ಹಲವು ಜನ ಭಕ್ತಾದಿಗಳು ತಮ್ಮ ಹರಕೆಗಳನ್ನು ತೀರಿಸಲು ಕಾಲುನಡಿಗೆಯಲ್ಲಿ ಏರಿ ತಿರುಮಲಕ್ಕೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಆದರೆ ಅನೇಕ ಜನ ಭಕ್ತಾದಿಗಳಿಗೆ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಸಾನಿಧ್ಯಕ್ಕೆ ತೆರಳೆಯಬೇಕಾದರೆ ಸೂಕ್ತ ವಿಧಿ ವಿಧಾನ ಅಥವಾ ಸಂಪ್ರದಾಯದ ಬಗ್ಗೆ ತಿಳಿದಿರುವುದಿಲ್ಲ. ಶ್ರೀ ಲಕ್ಷ್ಮಿ ದೇವಿಯು ವೈಕುಂಠ ವನ್ನು ತೊರೆದ ಮೇಲೆ ಆಕೆಯನ್ನು ಹುಡುಕುತ್ತಾ ಈ ಭೂಮಿಗೆ ಬಂದಂತಹ ಮಹಾವಿಷ್ಣುದೇವರು ಶ್ರೀ ವೆಂಕಟೇಶ್ವರ ಸ್ವಾಮಿಯಾಗಿ ಮಾತೆ ಪದ್ಮಾವತಿಯನ್ನು ವಿವಾಹವಾಗಿ ನೆಲಹಿಸಿದ ಪುಣ್ಯಭೂಮಿಯೇ ತಿರುಮಲ ತಿರುಪತಿ. ಇಂತಹ ಸನ್ನಿಧಾನದಲ್ಲಿ ದೇವರ ದರ್ಶನವನ್ನು ಪಡೆಯಬೇಕಾದರೆ ಕೆಲವು ವಿಧಾನಗಳನ್ನು ಅನುಸರಿಸಬೇಕು ನಮ್ಮಲ್ಲಿ ತಿರುಪತಿಗೆ ತೆರಳುವ ಹಲವರು ನೇರವಾಗಿ ತಿರುಮಲಕ್ಕೆ ತೆರಳಿ ತಿಮ್ಮಪ್ಪ ದೇವರ ದರ್ಶನವನ್ನು ಮಾಡಿ ಮರಳುತ್ತಾರೆ.
ಆದರೆ ಅದು ಸರಿಯಾದ ವಿಧಾನವಲ್ಲ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೂ ಮೊದಲು ನಾವು ದರ್ಶಿಸಲೇಬೇಕಾದಂತಹ ದೇವಾಲಯವು ಒಂದಿದೆ ಅದುವೇ ಆದಿ ವರಹ ಸ್ವಾಮಿಯ ದೇವಾಲಯ ಈ ದೇಗುಲ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲದ ಉತ್ತರಕ್ಕೆ ಸ್ವಾಮಿ ಪುಷ್ಕರಣಿಯ ತೀರದಲ್ಲಿ ನೆಲೆಸಿದೆ. ಶ್ರೀ ಆದಿ ವರಹ ಸ್ವಾಮಿ ದೇವಾಲಯವು ಶ್ರೀ ಮಹಾವಿಷ್ಣುವಿನ ವರಹಾವತಾರಕ್ಕೆ ಸಂಬಂಧಿಸಿದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯಕ್ಕಿಂತಲೂ ಪುರಾತನವಾದದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ತಿರುಮಲದ ಸಂಪ್ರದಾಯದಂತೆ ದಿನದ ಮೊಟ್ಟ ಮೊದಲ ನೈವೇದ್ಯವನ್ನು ಆದಿ ವರಹ ಸ್ವಾಮಿಗೆ ಅರ್ಪಿಸಲಾಗುತ್ತದೆ ಬಳಿಕವಷ್ಟೇ ನೈವೇದ್ಯವನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಲಾಗುತ್ತದೆ.
ಅದೇ ರೀತಿ ತಿರುಮಲಕ್ಕೆ ತೆರಳುವಂತಹ ಭಕ್ತಾದಿಗಳು ಮೊದಲು ಆದಿ ವರಹ ಸ್ವಾಮಿಯ ದರ್ಶನವನ್ನು ಪಡೆದು ಅದರ ನಂತರವಷ್ಟೇ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ. ಈ ಪದ್ಧತಿ ಜಾರಿಗೆ ಬರುವುದಕ್ಕೂ ಒಂದು ಕಾರಣವಿದೆ, ವರಹ ಪುರಾಣದ ಪ್ರಕಾರ ಕೃತಯುಗದಲ್ಲಿ ಹಿರಣ್ಯಾಕ್ಷನೆಂಬ ಅಸುರ ಭೂಮಿಯನ್ನು ಅಪಹರಣ ಮಾಡಿ ರಸಾತಳ ಎಂಬ ಲೋಕದಲ್ಲಿ ಮುಚ್ಚಿಟ್ಟಿರುತ್ತಾನೆ. ಆಗ ಮಹಾವಿಷ್ಣುದೇವರು ಕೋರೆಗಳುಳ್ಳ ಬೃಹತ್ ವರಹ ರೂಪವನ್ನು ತಳೆದು ರಸಾತಳಕ್ಕೆ ತೆರಳಿ ಹಿರಣ್ಯಾಕ್ಷನೊಂದಿಗೆ ಯುದ್ಧ ಮಾಡಿ ಆತನನ್ನು ಸಂಹರಿಸಿ ಭೂಮಿ ತಾಯಿಯನ್ನು ಅವರ ಸ್ವಸ್ಥಾನದಲ್ಲಿ ಇರಿಸುತ್ತಾನೆ. ಅನಂತರ ತಿರುಮಲದ ಏಳು ಬೆಟ್ಟಗಳಲ್ಲಿ ಇರುವಂತಹ ಸ್ವಾಮಿ ಪುಷ್ಕರಣಿಯಬಳಿ ನೆಲೆಸುತ್ತಾರೆ ಹೀಗಾಗಿ ತಿರುಪತಿ ಏಳು ಬೆಟ್ಟಗಳು ಆದಿ ವರಹ ಸ್ವಾಮಿಯವರ ಒಡೆತನದಲ್ಲಿ ಇದ್ದಿತ್ತು.
ಹಾಗಾಗಿಯೇ ತಿರುಮಲಕ್ಕೆ ಆದಿ ವರಹ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ನಂತರ ಭಗವಂತ ಶ್ರೀನಿವಾಸನ ರೂಪದಲ್ಲಿ ಬಂದ ಮೇಲೆ ಅವನಿಗೆ ನೆಲೆ ನಿಲ್ಲಲು ಸೂಕ್ತ ಸ್ಥಳದ ಅವಶ್ಯಕತೆ ಇದ್ದಿತ್ತು ಆಗ ಭಗವಂತ ಶ್ರೀನಿವಾಸರು ವರಹ ಸ್ವಾಮಿಯಲ್ಲಿ ತಮಗೆ ನೆಲೆ ನಿಲ್ಲಲು ತಳವನ್ನು ನೀಡುವಂತೆ ಕೇಳಿಕೊಳ್ಳುತ್ತಾರೆ ವರಹ ಸ್ವಾಮಿಗಳು ಪ್ರತಿಯಾಗಿ ತಮಗೆ ಏನು ದೊರೆಯುವುದು ಎಂದು ಕೇಳಿದಾಗ ಶ್ರೀ ವೆಂಕಟೇಶ್ವರ ಸ್ವಾಮಿಯು ತಮ್ಮನ್ನು ಬೇಡಿ ಬರುವ ಭಕ್ತಾದಿಗಳು ಮೊದಲಿಗೆ ನಿಮ್ಮ ಸನ್ನಿಧಾನಕ್ಕೆ ಆಗಮಿಸಿ ಅನಂತರ ನಾನಿದ್ದಲ್ಲಿ ಬಂದರೆ ಮಾತ್ರ ಅವರಿಗೆ ತಿರುಮಲಕ್ಕೆ ಬರುವ ಫಲ ದೊರೆಯುತ್ತದೆ ಹಾಗೂ ನನ್ನ ಆಶೀರ್ವಾದವೂ ಸಹ ಅವರಿಗೆ ದೊರೆಯುತ್ತದೆ ಎಂದು ಮಾತು ಕೊಡುತ್ತಾರೆ.