ಆಸ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪೋಡಿ ಎನ್ನುವ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಂಡಿರಲೇಬೇಕು. ಜನಸಾಮಾನ್ಯರಿಗೂ ಕೂಡ ಈ ಪೋಡಿ ಎನ್ನುವ ಶಬ್ದ ಆಗಾಗ ಕಿವಿಗೆ ಬಿದ್ದಿರುತ್ತದೆ, ಆದರೆ ಇದರ ಬಗ್ಗೆ ಡೀಟೇಲ್ ಆಗಿ ತಿಳಿದುಕೊಳ್ಳುವ ಗೋಜಿಗೆ ಹೋಗಿರುವುದಿಲ್ಲ. ಹಾಗಾಗಿ ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇಂದು ಈ ಅಂಕಣದಲ್ಲಿ ಆಸ್ತಿ ಮತ್ತು ಜಮೀನಿಗೆ ಸಂಬಂಧಪಟ್ಟ ಹಾಗೆ ಪೋಡಿ ಮಾಡುವುದು ಹೇಗೆ? ಇದರ ಪ್ರಾಮುಖ್ಯತೆ ಏನು? ಇದಕ್ಕಾಗಿ ಎಲ್ಲಿ ಹೇಗೆ ಅರ್ಜಿ ಹಾಕಬೇಕು? ಅರ್ಜಿ ಹಾಕಲು ಏನೆಲ್ಲಾ ದಾಖಲೆಗಳು ಬೇಕು? ಎಂಬುದರ ಮಾಹಿತಿ ಹೀಗಿದೆ ನೋಡಿ.
ಪೋಡಿಯಲ್ಲಿ ನಾಲ್ಕು ವಿಧ
1. ದರ್ಖಾಸ್ ಪೋಡಿ
2. ಆಲಿನೇಶನ್ ಪೋಡಿ
3. ಮ್ಯುಟೇಷನ್ ಪೋಡಿ
4. ತತ್ಕಾಲ್ ಪೋಡಿ
ತತ್ಕಾಲ್ ಪೋಡಿ ಸಾಮಾನ್ಯವಾಗಿ ಹೆಚ್ಚಿಗೆ ಎಲ್ಲಾ ಕಡೆ ಅನುಕೂಲಕ್ಕೆ ಬರುತ್ತದೆ. ತತ್ಕಾಲ್ ಪೋಡಿ ಎಂದರೇನು ಎನ್ನುವುದನ್ನು ಉದಾಹರಣೆ ಸಮೇತ ಹೇಳುವುದಾದರೆ, ಒಂದು ಜಮೀನಿನ ಸರ್ವೆ ನಂಬರ್ 100 ಇದೆ, ಈ 100 ಸಂಖ್ಯೆಯ ಸರ್ವೇ ನಂಬರ್ ಜಮೀನಿನಲ್ಲಿ 1,2,3,4 ಹೀಗೆ ನಾಲ್ಕು ಹಿಸ್ಸಾ ಸಂಖ್ಯೆಗಳು ಇವೆ ಎಂದುಕೊಳ್ಳೋಣ,
ಪ್ರತಿಯೊಂದು ಹಿಸ್ಸಾ ಸಂಖ್ಯೆಗೂ ಪ್ರತ್ಯೇಕ ಪಹಣಿ ಇದೆ. ಇಬ್ಬರು ವ್ಯಕ್ತಿಗಳು ಇದರಲ್ಲಿ ಅನುಭೋಗದಲ್ಲಿ ಇದ್ದಾರೆ ಆದರೆ ಪ್ರತ್ಯೇಕ ಎರಡು ಪಹಣಿಗಳಲ್ಲೂ ಇಬ್ಬರ ಹೆಸರು ಜೊತೆಯಲ್ಲಿ ಇರುತ್ತದೆ ಎಂದುಕೊಳ್ಳೋಣ. ಈ ರೀತಿ ಇದ್ದ ಸಂದರ್ಭದಲ್ಲಿ ಇಬ್ಬರು ರೈತರು ಮಾತನಾಡಿಕೊಂಡು ಈ ಸಮಸ್ಯೆ ಬಗೆ ಹರಿಸಿಕೊಂಡು ಪ್ರತ್ಯೇಕ ಪಹಣಿ ಮಾಡಿಕೊಂಡು ಇಬ್ಬರ ಹೆಸರು ಸಪರೇಟ್ ಆಗಿ ಬರಬೇಕು ಎನ್ನುವ ರೀತಿ ಮಾಡಿಕೊಳ್ಳಬೇಕು ಎನ್ನುವುದಾದರೆ ಅವರು ತತ್ಕಲ್ ಪೋಡಿ ಮೂಲಕವೇ ಅರ್ಜಿ ಸಲ್ಲಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಇಬ್ಬರು ರೈತರ ಆಧಾರ್ ಕಾರ್ಡ್
* ಜಮೀನಿನ ಪಹಣಿ
* ನಾಡ ಕಛೇರಿಯ ಸರ್ವೆ ವಿಭಾಗದಲ್ಲಿ ಕೆಲವು ಅರ್ಜಿಗಳು ಸಿಗುತ್ತವೆ, ಆವುಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು
* ಪೋಡಿ ಅರ್ಜಿ ಹತ್ತಿರದ ನಾಡ ಕಛೇರಿ, ಅಥವಾ ಅಕ್ಕಪಕ್ಕದ ಅಂಗಡಿಗಳಲ್ಲಿ ಸಿಗುತ್ತವೆ. ಇವುಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು
ಇನ್ನಿತರ ಪ್ರಮುಖ ಸಂಗತಿಗಳು:-
* ಪೋಡಿಗೆ ಅರ್ಜಿ ಸಲ್ಲಿಸಲು ರೂ.1200 ಶುಲ್ಕ ಪಾವತಿಸಬೇಕು
* ತತ್ಕಾಲ್ ಪೋಡಿಯಲ್ಲಿ ಆಸ್ತಿ ಹಕ್ಕು ಬದಲಾವಣೆ ಆಗುವುದಿಲ್ಲ, ರಿಜಿಸ್ಟ್ರೇಷನ್ ಅವಶ್ಯಕತೆ ಕೂಡ ಇರುವುದಿಲ್ಲ.
* ಅನುಭವದ ಆಧಾರದ ಮೇಲೆ ಬೌಂಡರಿಗಳನ್ನು ಫಿಕ್ಸ್ ಮಾಡಿ ಆಯಾ ಮಾಲೀಕರ ಹೆಸರಿಗೆ ಪಹಣಿಗಳು ಮಾತ್ರ ಪ್ರತ್ಯೇಕವಾಗುತ್ತವೆ
* ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ವಿವರಿಸುವುದಾದರೆ ಸರ್ವೆ ಮಾಡುವವರು ಪೋಡಿ ಮಾಡುವ ಜಮೀನನ್ನು ಗುರುತಿಸಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯು ಉಳುಮೆ ಮಾಡುತ್ತಿರುವುದರ ಅನುಭವದ ಆಧಾರದ ಮೇಲೆ ಅಥವಾ ವ್ಯವಸಾಯ ಭೂಮಿ ಗುರುತಿಸಿ ನಂತರ ಅದರ ಬೌಂಡರಿ ಫಿಕ್ಸ್ ಮಾಡುತ್ತಾರೆ. ತದ ನಂತರ ಪೋಡಿ ಆಗಿರುವ ಜಮೀನಿಗೆ ಆಕಾರ್ ಬಂಧ್ ಫಾರಂ 10 ತಯಾರಿಸಿಕೊಂಡು ರೆಕಾರ್ಡ್ ಸಿದ್ದಪಡಿಸುತ್ತಾರೆ. ಹೀಗೆ ಕಂದಾಯ ದಾಖಲೆಗಳು ತಯಾರಾಗುತ್ತವೆ.
* ಈ ರೀತಿ ತತ್ಕಾಲ್ ಪೋಡಿಗಳನ್ನು ಮಾಡಿಸಿಕೊಳ್ಳುವುದರಿಂದ ಏನು ಪ್ರಯೋಜನ ಎಂದು ಹೇಳುವುದಾದರೆ ಈ ರೀತಿ ಪಹಣಿಗಳು ಪ್ರತ್ಯೇಕವಾಗಿ ರೈತನ ಹೆಸರಿನಲ್ಲಿ ಏಕ ಮಾಲೀಕತ್ವದಲ್ಲಿ ಇದ್ದರೆ ಸರ್ಕಾರ ಸಿಗುವ ಎಲ್ಲಾ ಕೃಷಿ ಸಂಬಂಧಿತ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.