ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಘೋಷಿಸಿತ್ತು, ತಮ್ಮ ಪಕ್ಷವು ಗೆದ್ದು ಅಧಿಕಾರ ಸ್ಥಾಪಿಸಿದರೆ ಗ್ಯಾರಂಟಿಯಾಗಿ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತಂದೇ ತರುತ್ತೇವೆ ಎನ್ನುವ ಭರವಸೆಯನ್ನು ನೀಡಿ ಜನಮತ ಬೇಟೆ ಆಡಿತ್ತು. ಅಂತಿಮವಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಐದು ವರ್ಷಗಳ ಕಾಲ ಕರ್ನಾಟಕವನ್ನು ಆಳುವ ಅಧಿಕಾರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ.
ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು ತಾವು ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ತಮ್ಮದು ನುಡಿದಂತೆ ನಡೆಯುವ ಸರ್ಕಾರ ಹಾಗಾಗಿ ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಯಾವುದೇ ಬೆಲೆಯನ್ನಾದರೂ ತೆತ್ತು ಗ್ಯಾರಂಟಿ ಅನುಷ್ಠಾನಕ್ಕೆ ತರುತ್ತೇವೆ ಎನ್ನುವ ಭರವಸೆ ನೀಡಿ ಮೊದಲ ಸಚಿವ ಸಂಪುಟದಲ್ಲಿ ಅದಕ್ಕೆ ತಾತ್ವಿಕ ಅನುಮೋದನೆಯನ್ನು ಕೂಡ ನೀಡಿದ್ದರು.
ನಂತರ ಜೂನ್ 2ರಂದು ಅಧಿಕೃತವಾಗಿ ಎಲ್ಲ ಯೋಜನೆಗಳಿಗೂ ಇರುವ ರೂಪರೇಷೆಗಳು ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ಕೆಲ ಯೋಜನೆಗಳು ಲಾಂಚ್ ಆಗುವ ಡೇಟ್ ಗಳನ್ನು ಕೂಡ ಅನೌನ್ಸ್ ಮಾಡಿದ್ದಾರೆ. ಹಾಗೆಯೇ ಯುವಜನತೆಯು ನಿರೀಕ್ಷೆಯಿಂದ ಕಾಯುತ್ತಿದ್ದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಬಗ್ಗೆಯೂ ಕೂಡ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ.
ಈ ಯೋಜನೆಯು ಕರ್ನಾಟಕದಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೂ ಜೀವನ ನಿರ್ವಹಣೆಗಾಗಿ ನಿರುದ್ಯೋಗ ಭತ್ಯೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಇದರ ಸಂಬಂಧ ಈಗ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳು ನಡಾವಳಿಯನ್ನು ಹೊರಡಿಸಿದ್ದಾರೆ. ಇದರಲ್ಲಿ ಯುವನಿಧಿ ಯೋಜನೆ ಬಗ್ಗೆ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ ಅದು ಇಂತಿವೆ.
● 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಮತ್ತು ಡಿಪ್ಲೋಮಾ ಪೂ,ರ್ತಿ ಗೊಳಿಸಿದ ಎಲ್ಲಾ ನಿರುದ್ಯೋಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ತೃತಿಯ ಲಿಂಗಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
● ಪದವಿ ಅಥವಾ ಡಿಪ್ಲೋಮಾ ಪೂರ್ತಿಗೊಂಡ 120 ದಿನಗಳವರೆಗೂ ಕೂಡ ಉದ್ಯೋಗ ಲಭಿಸದೆ ಇದ್ದವರು ಅರ್ಜಿ ಸಲ್ಲಿಸಬಹುದು.
● ಈ ರೀತಿ ನೋಂದಣಿ ಮಾಡಿಕೊಂಡ ನಿರುದ್ಯೋಗಿಗಳಿಗೆ ಅವರ ನೋಂದಣಿ ಮಾಡಿಕೊಂಡ ದಿನದಿಂದ ಗರಿಷ್ಠ ಎರಡು ವರ್ಷಗಳವರೆಗೆ ಈ ಯುವನಿಧಿ ಯೋಜನೆ ಯ ನಿರುದ್ಯೋಗ ಭತ್ಯೆ ಸಿಗಲಿದೆ.
● ಒಂದು ವೇಳೆ ಮಧ್ಯದಲ್ಲಿ ಫಲಾನುಭವಿಗಳು ಖಾಸಗಿ ಅಥವಾ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಂಡರೆ ಅದನ್ನು ಘೋಷಿಸಿಕೊಳ್ಳಬೇಕು ನಂತರ ನಿರುದ್ಯೋಗ ಭತ್ಯೆಯನ್ನು ಕಡಿತಗೊಳಿಸಲಾಗುತ್ತದೆ.
● ಯುವನಿಧಿ ಯೋಜನೆಯಡಿ ಪದವಿ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ಮತ್ತು ಡಿಪ್ಲೋಮಾ ಪದವಿ ಪಡೆದ ನಿರುದ್ಯೋಗಿಗಳಿಗೆ 1500 ನಿರುದ್ಯೋಗ ಭತ್ಯೆ ಸಿಗಲಿದೆ.
● ಈ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಅನ್ನು ಸಿದ್ಧಪಡಿಸಲಾಗುತ್ತಿದ್ದು, ಫಲಾನುಭವಿಗಳು ಕೇಳಲಾಗುವ ವೈಯಕ್ತಿಕ ವಿವರಕ್ಕೆ ಸಂಬಂಧಪಟ್ಟ ಹಾಗೆ ಗುರುತಿನ ಚೀಟಿ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಸಂಬಂಧ ಪಟ್ಟ ಹಾಗೆ ಕೆಲ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು.
● ಕರ್ನಾಟಕದಲ್ಲಿ ವಿದ್ಯಾಭ್ಯಾಸ ಪಡೆದ ಮತ್ತು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
● ಅರ್ಜಿ ಸಲ್ಲಿಕೆ ಪೂರ್ತಿಗೊಂಡ ಬಳಿಕ ದಾಖಲೆಗಳ ಪರಿಶೀಲನೆ ನಡೆದು ನಿರಂತರವಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ.