ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವೈಫಲ್ಯದಿಂದಾಗಿ ರೈತರ ಪರಿಸ್ಥಿತಿ ತೀರ ಹದಗೆಟ್ಟಿದೆ. ಹಿಂಗಾರಿನ ಬೆಳೆ ಮೇಲೆ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತಾದರೂ ಈಗ ಹಿಂಗಾರು ಬೆಳೆಯ ಮೇಲೂ ರೈತರ ಆಸೆ ಹೋಗಿದೆ. ಈ ವರ್ಷ ಕರ್ನಾಟಕಕ್ಕೆ ಬರ ಸಿಡಿಲು ಬಡಿದಿದ್ದು ಈ ಸ್ಥಿತಿಯಿಂದ ಬಡ ರೈತ ಕುಟುಂಬಗಳು ತತ್ತರಿಸಿ ಹೋಗಿವೆ.
ಜಾನುವಾರುಗಳಿಗೆ ಮೇವಿನ ಕೊರತೆ, ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಕೂಡ ಉಂಟಾಗಿರುವುದರಿಂದ ಜನ ಉದ್ಯೋಗ ಹರಸಿ ಹೊಟ್ಟೆಪಾಡಿಗಾಗಿ ಕುಟುಂಬ ಸಮೇತ ಗುಳೆ ಹೋಗುವಂತಾಗಿದೆ. ಇದನ್ನು ತಪ್ಪಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಇಂತಹ ಪರಿಸ್ಥಿತಿಗಳಲ್ಲಿ ನರೇಗಾ ಯೋಜನೆಯು ರೈತರ ಕೈ ಹಿಡಿಯಲಿದೆ.
ಹಾಗಾಗಿ ಈ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜಿಲ್ಲೆಯ ಸಾರ್ವಜನಿಕರಿಗೆ ಅರಿವು ಮೂಡಿಸಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಪಂ ಇದೀಗ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಎನ್ನುವ ಅಭಿಯಾನ ಆಯೋಜಿಸಿದೆ. ಇದರ ಕುರಿತು ಮಾಹಿತಿ ಹೀಗಿದೆ ನೋಡಿ.
ಗ್ರಾಮೀಣ ಭಾಗದಲ್ಲಿರುವ ಒಂದು ಕುಟುಂಬವು ತನ್ನ ಜೀವಿತಾವಧಿಯಲ್ಲಿ ವೈಯಕ್ತಿಕ ಕಾಮಗಾರಿಗೆ ಕುರಿ ಶೆಡ್, ಮೇಕೆ ಶೆಡ್, ದನದ ಕೊಟ್ಟಿಗೆ, ಬದು ನಿರ್ಮಾಣ, ಬಚ್ಚಲುಗುಂಡಿ ಮತ್ತು ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆ ವೈಯಕ್ತಿಕ ಕಾಮಗಾರಿಗಳಿಗೆ ಗರಿಷ್ಠ 5 ಲಕ್ಷದವರೆಗೆ ನರೇಗಾ ಕಾಮಗಾರಿಗಳ ಸೌಲಭ್ಯ ಪಡೆಯಬಹುದು.
2.5 ಲಕ್ಷದಿಂದ 5 ಲಕ್ಷಕ್ಕೆ ಯೋಜನೆಯ ಮಿತಿಯನ್ನು ಈಗಷ್ಟೇ ಏರಿಸಲಾಗಿದೆ. ಮತ್ತು ಗ್ರಾಮೀಣ ಭಾಗದಲ್ಲಿರುವ ಯುವಕರು ಒಂದು ವರ್ಷಕ್ಕೆ ಕನಿಷ್ಠ 100 ದಿನಗಳವರೆಗೆ ಉದ್ಯೋಗ ಖಾತರಿ ಯೋಜನೆ ಅಡಿ ಒಂದು ದಿನಕ್ಕೆ 315 ವೇತನದಂತೆ ಖಚಿತ ಉದ್ಯೋಗ ಪಡೆದುಕೊಳ್ಳಬಹುದು.
ಸದ್ಯ ರಾಜ್ಯದ ವಿವಿಧ ತಾಲೂಕುಗಳಲ್ಲಿ 2024 25ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆ ವಾರ್ಷಿಕ ಕ್ರಿಯಾ ಯೋಜನೆ ವರದಿ ಸಿದ್ಧಪಡಿಸಲಾಗುತ್ತಿದ್ದು ಇವುಗಳ ಸೌಲಭ್ಯವನ್ನು ರೈತ ಹಾಗೂ ಕೃಷಿ ಭೂಮಿ ರಹಿತ ರೈತ ಕೂಲಿ ಕಾರ್ಮಿಕರು ಕೂಡ ಪಡೆದುಕೊಳ್ಳಬಹುದಾಗಿದೆ.
ಇದರ ಬಗ್ಗೆ ಹಳ್ಳಿಗಾಡಿನ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನಡಿಗೆ ಸುಸ್ಥಿರತೆಯಡಿಗೆ ಎಂಬ ವಿಶೇಷ ರೋಜಗಾರ್ ದಿವಸ ಅಭಿಯಾನ ನಡೆಸುತ್ತಿದೆ.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತ್ತು 65 ವರ್ಷ ಮೇಲ್ಪಟ್ಟ ವೃದ್ಧರು ಕೂಡ ಕಾಮಗಾರಿಗಳ ಪ್ರಯೋಜನ ಪಡೆದುಕೊಳ್ಳಲು ಅಥವಾ ಉದ್ಯೋಗ ಖಾತರಿ ಯೋಜನೆ ಅಡಿ ಉದ್ಯೋಗ ಪಡೆದುಕೊಳ್ಳಲು ಜಾಬ್ ಕಾರ್ಡ್ ಬೇಕಾಗಿದ್ದಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಭೌತಿಕವಾಗಿ ತಮ್ಮ ಗ್ರಾಮ ಪಂಚಾಯಿತಿಗೆ ಸೂಕ್ತ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಅಥವಾ ಕಾಯಕ ಮಿತ್ರ ಆಪ್ ಬಳಸಿ ಕೂಡ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಗೆ ಭೇಟಿ ಕೊಡಿ.
ಅರ್ಜಿ ಸಲ್ಲಿಸಲು ಅರ್ಹರು:-
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು
● ಅಲೆಮಾರಿ ಬುಡಕಟ್ಟುಗಳು
● ಅಧಿಸೂಚನೆಯಿಂದ ಕೈ ಬಿಟ್ಟ ಬುಡಕಟ್ಟುಗಳು
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
● ಮಹಿಳಾ ಪ್ರಧಾನ ಕುಟುಂಬಗಳು
● ವಿಕಲ ಚೇತನ ಕುಟುಂಬಗಳು
● ಭೂ ಸುಧಾರಣಾ ಫಲಾನುಭವಿಗಳು
● ವಸತಿ ಯೋಜನೆಯ ಫಲಾನುಭವಿಗಳು
● ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು
● ಸಣ್ಣ ಮತ್ತು ಅತಿ ಸಣ್ಣ ರೈತರು
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಬ್ಯಾಂಕ್ ಖಾತೆ ವಿವರ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಉದ್ಯೋಗ ಚೀಟಿಗಾಗಿ ಅರ್ಜಿ ಸಲ್ಲಿಸುತ್ತಿದ್ದ ಗ್ರಾಮ ಪಂಚಾಯಿತಿಗೆ ಸಿಗುವ ನಮೂನೆ – 6
● ಕಾಮಗಾರಿಗಳ ಪ್ರಯೋಜನ ಪಡೆಯಲು ಬಯಸುತ್ತಿದ್ದರೆ ಅದಕ್ಕೆ ಸಂಬಂಧಪಟ್ಟ ಪೂರಕ ದಾಖಲೆಗಳು.