ಹೆಣ್ಣು ಮಕ್ಕಳು ಎರಡು ಮನೆಯನ್ನು ಹೊಂದಿರುತ್ತಾರೆ ಒಂದು ಹುಟ್ಟಿ ಬೆಳೆದ ತವರು ಮನೆ, ಮತ್ತೊಂದು ಸೇರುವ ಗಂಡನ ಮನೆ ನಮ್ಮ ನೆಲದ ಸಂಸ್ಕೃತಿಯ ಪ್ರಕಾರ ಹೆಣ್ಣು ಮಕ್ಕಳು ಮದುವೆ ಆಗಿ ಗಂಡನ ಮನೆಯನ್ನು ಸೇರಲೇಬೇಕು, ನಂತರ ಆಕೆಗೆ ಗಂಡನ ಮನೆಯ ಜವಾಬ್ದಾರಿಗಳು ಬರುತ್ತವೆ. ತನ್ನ ತವರು ಮನೆಯ ಜವಾಬ್ದಾರಿಗಳನ್ನು ಆಕೆ ಸಹೋದರರು ನೋಡಿಕೊಳ್ಳುತ್ತಾರೆ.
ತವರು ಮನೆಯಿಂದ ಹೆಣ್ಣು ಮಕ್ಕಳಿಗೆ ಮಾಡಬೇಕಾದ ಕರ್ತವ್ಯಗಳನ್ನು ತಂದೆ-ತಾಯಿ ಅಥವಾ ಅವರ ಸ್ಥಳದಲ್ಲಿ ನಿಂತು ಸಹೋದರರೇ ಮಾಡುತ್ತಾರೆ. ಇಲ್ಲಿಯವರೆಗೂ ಕೂಡ ಇದೇ ರೀತಿಯಾಗಿ ಇತ್ತು ಆದರೆ ಈಗ ಕಾಲ ಹೇಗಾಗಿದೆ ಎಂದರೆ ಯಾರು ಕೂಡ ತಮ್ಮ ತಮ್ಮ ಸ್ಥಾನಗಳಿಗೆ ಬದ್ಧವಾಗಿ ಬದುಕುತ್ತಿಲ್ಲ, ಯಾವ ಸಂಬಂಧಗಳಲ್ಲೂ ಆತ್ಮೀಯತೆ ಉಳಿದಿಲ್ಲ, ಎಲ್ಲವೂ ಹಣದ ಮೇಲೆ ನಿರ್ಧಾರವಾಗಿ ಹೋಗಿದೆ.
ಆಸ್ತಿ ವಿಚಾರವಾಗಿ ಸಹೋದರ ಸಹೋದರಿ ಮಧ್ಯೆ ಕಲಹ ಏರ್ಪಡುತ್ತಿದೆ, ತಂದೆ-ಮಕ್ಕಳೇ ವಿರುದ್ಧವಾಗಿ ಕೋರ್ಟು ಕಛೇರಿ ಅಲೆಯುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಕಡಿಮೆ ಇಲ್ಲ. ಮದುವೆಯಾಗಿ ಗಂಡನ ಮನೆ ಸೇರಿ ವರ್ಷಗಳಾಗಿದ್ದರು ಕೂಡ ಈಗ ತವರು ಮನೆಯ ಆಸ್ತಿ ಬೇಕು ಎಂದು ಕೇಸ್ ಹಾಕುತ್ತಿದ್ದಾರೆ.
ಆದರೆ ಈ ರೀತಿ ಕೇಸ್ ಹಾಕುವ ಹೆಣ್ಣು ಮಕ್ಕಳು ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲವಾದರೆ ನೀವು ಯಾರೋ ಮಾಡಿದ್ದಾರೆ ಅಥವಾ ಹೇಳಿದ್ದಾರೆ ಎಂದು ಸೀದಾ ಕೋರ್ಟ್ ಗೆ ಹೋದರೆ ನಿಮ್ಮ ತವರು ಮನೆಯ ಪ್ರೀತಿಯನ್ನು, ಸಂಬಂಧವನ್ನು ಕೂಡ ಕಳೆದುಕೊಳ್ಳುತ್ತಿದ್ದೀರಿ ಮತ್ತು ಕೋರ್ಟು ಕಚೇರಿಗೆ ಅಲೆದು ಹಣ ವ್ಯರ್ಥ ಮಾಡಿಕೊಂಡು ಆಸ್ತಿಯನ್ನು ಕಳೆದುಕೊಳ್ಳುತ್ತೀರಿ.
ಹಿಂದೂ ಉತ್ತರಾಧಿಕಾರಿ ಕಾಯಿದೆ 2005ರ ನಂತರ ಹೆಣ್ಣು ಮಕ್ಕಳಿಗೂ ಕೂಡ ತಂದೆ ಪಿತ್ರಾರ್ತಜಿ ಆಸ್ತಿಯಲ್ಲಿ ಹಕ್ಕಿದೆ. ಆಕೆ ಖಂಡಿತವಾಗಿಯೂ ತನ್ನ ಪಾಲಿನ ಹಕ್ಕನ್ನು ಪಡೆದುಕೊಳ್ಳಬಹುದು. ಆದರೆ ಆಸ್ತಿ ವಿಭಾಗವಾಗುವ ಸಂದರ್ಭದಲ್ಲಿ ತನಗೆ ಆಸ್ತಿ ಬೇಡ ಎಂದು ಅಥವಾ ಉಡುಗೊರೆ ರೂಪದಲ್ಲಿ ಮತ್ತೆ ಏನನ್ನಾದರೂ ಪಡೆದು ಹಕ್ಕು ಬಿಡುಗಡೆ ಮಾಡಿಕೊಟ್ಟು ಈಗ ಆಸ್ತಿ ಬೇಕು ಎಂದು ಕೇಸ್ ಹಾಕಿದರೆ ಅದು ನಡೆಯುವುದಿಲ್ಲ.
ಹಾಗೆಯೇ ತಂದೆ ತಾಯಿಯ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆ ದಾನ ಪತ್ರದ ಮೂಲಕ ಪಡೆದಿದ್ದರೂ ಕೂಡ ತನ್ನ ಕೆಲ ಜವಾಬ್ದಾರಿಯನ್ನು ನಿರ್ವಹಿಸಬೇಕು. ತಂದೆ ತಾಯಿಯು ತಮ್ಮ ಹೆಣ್ಣು ಮಗಳಿಗೆ ಇನ್ನು ಮುಂದೆ ನಮ್ಮ ಸಂಪೂರ್ಣ ಜವಾಬ್ದಾರಿ ನಿನ್ನದು ಹಾಗಾಗಿ ನಮ್ಮ ಪಾಲಿನ ಆಸ್ತಿಯನ್ನು ನಿನಗೆ ಕೊಡುತ್ತಿದ್ದೇವೆ.
ಇನ್ನು ಮುಂದೆ ನಮ್ಮ ಎಲ್ಲಾ ಪೂರ್ವಾಪರಗಳನ್ನ ನೀನೆ ನೋಡಿಕೊಳ್ಳಬೇಕು ಎಂದು ಬರೆದಿದ್ದರೆ, ಆಸ್ತಿಯನ್ನು ಪಡೆದ ನಂತರ ಆಕೆ ಆ ಮಾತಿಗೆ ನಡೆದುಕೊಂಡಾಗ ಮಾತ್ರ ಆಸ್ತಿ ಆಕೆಗೆ ಉಳಿಯುತ್ತದೆ. ತನ್ನ ಕರ್ತವ್ಯಗಳನ್ನು ಮಾಡದೆ ಹೋದರೆ ಆಗ ತಂದೆ ತಾಯಿ ತಾವು ಕೊಟ್ಟಿದ್ದ ಆಸ್ತಿಯನ್ನು ಮರಳಿ ಪಡೆದುಕೊಳ್ಳಬಹುದು. ಕಾನೂನಿನಲ್ಲಿ ಇದಕ್ಕೂ ಕೂಡ ಅವಕಾಶ ಇದೆ.
ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007 ರಲ್ಲಿ ಈ ರೀತಿ ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ಮರಳಿ ಪಡೆಯುವ ಅಧಿಕಾರ ಪೋಷಕರಿಗಿದೆ. ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡು ಮಕ್ಕಳಿಗೂ ಕೂಡ ಇದೇ ನಿಯಮ ಅನ್ವಯವಾಗುತ್ತದೆ.