ಪ್ರತಿ ತಿಂಗಳು ಒಂದನೇ ತಾರೀಖಿನಂದು ಬ್ಯಾಂಕುಗಳಲ್ಲಿ ಹಾಗೂ ಕೆಲ ವಸ್ತುಗಳ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಪ್ರತಿತಿಂಗಳ ಒಂದನೇ ತಾರೀಕು ಜನರು ಬಹಳಷ್ಟು ವಿಷಯಗಳ ಬಗ್ಗೆ ಗಮನ ಕೊಡುತ್ತಾರೆ. 1 ನೇ ತಾರೀಖಿನಿಂದ ಮುಂಚೆ ಹಾಗೂ 1 ನೇ ತಾರೀಖಿನ ನಂತರ ಅನೇಕ ವಿಷಯಗಳಲ್ಲಿ ಬದಲಾವಣೆ ಆಗುತ್ತದೆ.
ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಸಿಲಿಂಡರ್ ಬೆಲೆ, ಎಲೆಕ್ಟ್ರಿಕಲ್ ಬೈಕ್ ಮತ್ತು ಕಾರ್ ಗಳ ಮಾರಾಟ ಸೇರಿದಂತೆ ಶೈಕ್ಷಣಿಕ ವರ್ಷದ ಶಾಲೆ ಆರಂಭ ಇನ್ನು ಮುಂತಾದ ಅನೇಕ ವಿಷಯಗಳು 1ನೇ ತಾರೀಖಿನಂದು ಹೊಸತನ ತರಲಿದೆ. ಈಗ ಜೂನ್ 1 ನೇ ತಾರೀಖಿನಿಂದ ಭಾರತೀಯರಿಗೆ ಯಾವೆಲ್ಲ ವಿಷಯಗಳು ಬದಲಾಗಲಿದೆ ಎನ್ನುವ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.
● ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳ ಬೆಲೆಗಳು ದುಬಾರಿಯಾಗಲಿವೆ:-
ನೀವು ಜೂನ್ 1 ನೇ ತಾರೀಕಿನ ನಂತರ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಿದರೆ ಈ ಹಿಂದಿನ ಬೆಲೆಗಿಂತ ಹೆಚ್ಚಿನ ಬೆಲೆ ತೆರಬೇಕು. ಯಾಕೆಂದರೆ ಈಗ ಎಲೆಕ್ಟ್ರಿಕಲ್ ಬೈಕ್ ಮತ್ತು ಕಾರುಗಳ ಮೇಲಿದ್ದ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆ. ಈ ಬಗ್ಗೆ ಮೇ 19 ನೇ ತಾರೀಖಿನಂದು ಕೈಗಾರಿಕಾ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸಿದೆ. ಈ ಅಧಿಸೂಚನೆ ಹೊರಬೀಳುವ ಮೊದಲು KWH ಗೆ 15,000 ಸಬ್ಸಿಡಿ ಸಿಗುತ್ತಿತ್ತು ಈಗ ಅದು 10,000 ಕ್ಕೆ ಇಳಿದಿದೆ.
● PNG – CNG ಬೆಲೆಗಳಲ್ಲಿ ಕೂಡ ಬದಲಾವಣೆ:-
ಪ್ರತಿ ತಿಂಗಳ ಮೊದಲ ವಾರದಲ್ಲಿ PNG – CNG ಗಳ ಬೆಲೆ ಬದಲಾವಣೆ ಆಗುತ್ತದೆ. ದೆಹಲಿ ಹಾಗೂ ಮುಂಬೈನಲ್ಲಿ ಪೆಟ್ರೋಲಿಯಂ ಕಂಪನಿಗಳು ಈ ಬೆಲೆಯನ್ನು ಪರಿಷ್ಕರಿಸುತ್ತವೆ. ಕಳೆದ ಮೇ ತಿಂಗಳಲ್ಲಿ ಇವುಗಳಲ್ಲಿ ಯಾವುದೇ ವ್ಯತ್ಯಾಸವಾಗದೆ ಸ್ಥಿರವಾಗಿತ್ತು, ಜೂನ್ 1 ನೇ ತಾರೀಖಿನಲ್ಲಿ ಅಥವಾ ಮೊದಲ ವಾರದಲ್ಲಿ ಇದು ಬದಲಾವಣೆ ಆಗುವ ಸಾಧ್ಯತೆ ಇದೆ ಇದು ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿ ವ್ಯತ್ಯಾಸವನ್ನು ತರಬಹುದು ಎಂದು ನಿರೀಕ್ಷಿಸಲಾಗಿದೆ.
● ಬ್ಯಾಂಕ್ ಗಳಿಂದ ಗ್ರಾಹಕರಿಗೆ ಹಣ ವಾಪಸ್:-
100 ದಿನಗಳು 100 ಪಾವತಿ ಎನ್ನುವ ವಿಶೇಷ ಅಭಿಯಾನವನ್ನು ರಿಸರ್ವ್ ಬ್ಯಾಂಕ್ ಆರಂಭಿಸಿತ್ತು. 10 ವರ್ಷಗಳಿಂದ ಯಾವುದೇ ವಹಿವಾಟು ಮಾಡದ ಬ್ಯಾಂಕ್ ಖಾತೆಗಳನ್ನು ಕ್ಲೈಮ್ ಮಾಡಿ ಹಣ ಪಡೆದುಕೊಳ್ಳಲು ಗ್ರಾಹಕರಿಗೆ ಅವಕಾಶವನ್ನು ನೀಡುವ ಉದ್ದೇಶದಿಂದ ಇದನ್ನು ಆರಂಭಿಸಿತು. ಜೊತೆಗೆ ಈ ಖಾತೆಗಳನ್ನು ಗುರುತಿಸಲು ಜಿಲ್ಲಾ ಕೇಂದ್ರಗಳಲ್ಲಿ 100 ದಿನಗಳವರೆಗೆ ಅಭಿಯಾನ ನಡೆಸಿ, ಕ್ಲೈಮ್ ಮಾಡದ ಠೇವಣಿ ಮೊತ್ತವನ್ನು ಇತ್ಯರ್ಥಪಡಿಸಲು ಸೂಚಿಸಿತ್ತು. ಈಗ ಜೂನ್ 1ರಿಂದ ಗ್ರಾಹಕರಿಗೆ ತಮ್ಮ ಖಾತೆಯನ್ನು ಕ್ಲೈಮ್ ಮಾಡಲು ಅವಕಾಶ ನೀಡಲಾಗುತ್ತದೆ.
● LPG ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ:-
ಭಾರತದಲ್ಲಿರುವ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು 1ನೇ ತಾರೀಖಿನಂದು LPG ಗ್ಯಾಸ್ ಬೆಲೆಯನ್ನು ನಿಗದಿಪಡಿಸುತ್ತವೆ. LPG ಗ್ಯಾಸ್ ಸಿಲಿಂಡರ್ ಗಳು ಎರಡು ತಿಂಗಳಲ್ಲಿ 50 ರೂ ಹೆಚ್ಚಾಗಿತ್ತು. ಈಗ ಜೂನ್ 1ನೇ ತಾರೀಖಿನಿಂದ ಗ್ಯಾಸ್ ಬೆಲೆ ಹೆಚ್ಚಾಗಲಿದೆಯೋ ಅಥವಾ ಕಡಿಮೆ ಆಗಲಿದೆಯೋ ಎಂದು ಜನರು ಲೆಕ್ಕಾಚಾರ ಹಾಕುತ್ತಿದ್ದಾರೆ. ಜೂನ್ 1ನೇ ತಾರೀಕು ಅಥವಾ ಮೊದಲ ವಾರದಲ್ಲಿ ಇದು ತಿಳಿಯಲಿದೆ.