ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದ ವೇಳೆ ತಮ್ಮ ಸರ್ಕಾರ ಗೆದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಅನೌನ್ಸ್ ಮಾಡಿತ್ತು. ಈ ಐದರ ಪೈಕಿ ಅನ್ನ ಭಾಗ್ಯ ಯೋಜನೆ ಅಡಿ ನೀಡುತ್ತಿರುವ 5Kg ಪಡಿತರವನ್ನು 10 Kg ಗೆ ಏರಿಸಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು.
ಅನ್ನ ಭಾಗ್ಯ ಯೋಜನೆಯು ಜುಲೈ ತಿಂಗಳಿಂದ ಜಾರಿಗೆ ಬರುತ್ತದೆ ಎನ್ನುವ ಆದೇಶ ಪತ್ರವು ಕೂಡ ಹೊರಬಿದ್ದಿತ್ತು. ಈ ಯೋಜನೆ ಜಾರಿಗೆ ಸಾಕಷ್ಟು ಶ್ರಮಿಸಿದ ಸರ್ಕಾರವು ಹೆಚ್ಚುವರಿ 5 ಕೆಜಿಗೆ ಬೇಕಾದ ಅಕ್ಕಿ ಸಿಗದ ಕಾರಣ ಅದಕ್ಕೆ ಪರ್ಯಾಯ ಮಾರ್ಗ ಹುಡುಕಿಕೊಂಡಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚಿಸಿ ಅಕ್ಕಿಯ ಬದಲಾಗಿ ಹಣವನ್ನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕೇಂದ್ರಕ್ಕೆ ಹೆಚ್ಚುವರಿ ಅಕ್ಕಿ ಖರೀದಿಸಲು Kg ಅಕ್ಕಿಗೆ 34ರೂ. ನೀಡುವುದಾಗಿ ಒಪ್ಪಿಕೊಂಡಿದ್ದ ಸರ್ಕಾರ ಅಕ್ಕಿ ಸಿಗುವವರೆಗೂ ಕೂಡ ಅದೇ ದರದ ಆಧಾರದ ಮೇಲೆ ಒಬ್ಬ ಸದಸ್ಯನಿಗೆ 5Kg ಅಕ್ಕಿ ಬದಲು 170 ರೂಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ನಿರ್ಧಾರ ಮಾಡಿದೆ. ಇಬ್ಬರು ಸದಸ್ಯರಿರುವ ಕುಟುಂಬಕ್ಕೆ ಎಂದಿನಂತೆ ಕೇಂದ್ರದಿಂದ 10 Kg. ಅಕ್ಕಿ ಮತ್ತು 340 ರೂ. ಹಣ ಈ ರೀತಿ ಕುಟುಂಬದ ಸದಸ್ಯರ ಆಧಾರದ ಮೇಲೆ ಆ ಕುಟುಂಬದ ಯಜಮಾನರ ಖಾತೆಗೆ ಒಟ್ಟು ಮೊತ್ತದ ಹಣ ಜಮೆ ಮಾಡುದಾಗಿ ತಿಳಿಸಿದೆ.
ಸದ್ಯಕ್ಕೆ ರಾಜ್ಯದಲ್ಲಿ ಇರುವ ಬಹುತೇಕ ಎಲ್ಲಾ ರೇಷನ್ ಕಾರ್ಡ್ ಗಳಲ್ಲೂ 98% ಮಹಿಳೆಯ ಹೆಸರಿನಲ್ಲಿಯೇ ಇದೆ. ಆದ್ದರಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೂ ಮುನ್ನ ಧನಲಕ್ಷ್ಮಿ ಹಣ ಕೈಸೇರುವುದು ಪಕ್ಕ ಆಗಿದೆ. ರೇಷನ್ ಕಾರ್ಡ್ ನ ಮೊದಲ ಪುಟದಲ್ಲಿ ಯಾರ ಹೆಸರು ಇದೆಯೋ ಅವರನ್ನೇ ಕುಟುಂಬದ ಯಜಮಾನರು ಎಂದು ಭಾವಿಸಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ನೇರವಾಗಿ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆದ್ದರಿಂದ ಈ ಧನ ಭಾಗ್ಯ ಯೋಜನೆಯ ಹಣ ಪಡೆಯಲು ಯಾವುದೇ ಅರ್ಜಿ ಸಲ್ಲಿಸಬೇಕಾದ ಅಗತ್ಯ ಇಲ್ಲ ಎನ್ನುವುದು ಸ್ಪಷ್ಟ ಆಗಿದೆ. ಆದರೆ ಮನೆಯ ಯಜಮಾನನ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲೇ ಬೇಕಾದದ್ದು ಕಡ್ಡಾಯವಾಗಿದೆ. ಒಂದು ವೇಳೆ ಮನೆಯ ಯಜಮಾನನ ಆಧಾರ್ ಕಾರ್ಡ್ ಯಾವುದೇ ಬ್ಯಾಂಕ್ ಖಾತೆಗೂ ಲಿಂಕ್ ಆಗದೆ ಇದ್ದ ಪಕ್ಷದಲ್ಲಿ ಉಳಿದ ಸದಸ್ಯರ ಒಬ್ಬರ ಬ್ಯಾಂಕ್ ಮಾಹಿತಿ ಕೊಟ್ಟು ಹಣ ಪಡೆಯಬಹುದು ಎನ್ನುವ ಅವಕಾಶವನ್ನು ಕೂಡ ಸರ್ಕಾರ ನೀಡಿದೆ.
ಆಹಾರ ಇಲಾಖೆ ಮಾಹಿತಿ ಪ್ರಕಾರ, ಸದ್ಯ ಕರ್ನಾಟಕ ರಾಜ್ಯದಲ್ಲಿ 1.28 ಕೋಟಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇದ್ದಾರೆ. ಅದರಲ್ಲಿ 6 ಲಕ್ಷ ಖಾತೆದಾರರ ಆಕೌಂಟ್ ಸಮಸ್ಯೆ ಮತ್ತು ಅಧಾರ್ ಲಿಂಕ್ ಆಗದೇ ಇರುವ ಸಮಸ್ಯೆ ಇದೆ. ಇವರಿಗೆ ಜುಲೈ ತಿಂಗಳಿನಲ್ಲಿ ಹಣ ಸಿಗುವುದು ಅನುಮಾನವಾಗಿದೆ ಆದರೆ ಕುಟುಂಬದ ಇತರ ಸದಸ್ಯರ ಬ್ಯಾಂಕ್ ಖಾತೆ ನೀಡಿದ್ದಲ್ಲಿ ಸಮಸ್ಯೆ ಆಗುವುದಿಲ್ಲ ಇಲ್ಲವಾದಲ್ಲಿ ಅಕೌಂಟ್ ಗೆ ಆಧಾರ್ ಲಿಂಕ್ ಮಾಡಿಸಿದ ಬಳಿಕವಷ್ಟೇ ದುಡ್ಡು ನೇರವಾಗಿ DBT ಮೂಲಕ ಜಮೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.