ಈಗಿನ ಕಾಲದ ಕಾನ್ವೆಂಟ್ ಗೆ ಹೋಗುವ ಮಕ್ಕಳನ್ನು ನೋಡಿದರೆ ಖಂಡಿತ ಬೇಸರವಾಗುತ್ತದೆ. ಯಾಕೆಂದರೆ ಬೆಳಗ್ಗೆ 6:30, 7:00 ಘಂಟೆಗೆ ಮಕ್ಕಳು ಮನೆ ಬಿಡುತ್ತಿದ್ದಾರೆ. ಮಾರ್ನಿಂಗ್ ಟಿಫನ್, ಮಧ್ಯಾಹ್ನದ ಲಂಚ್, ಇವಿನಿಂಗ್ ಸ್ನಾಕ್ಸ್ ಎಲ್ಲಕ್ಕೂ ಕೂಡ ಬಾಕ್ಸ್ ಕಟ್ಟಿಕೊಂಡು ಹೋಗಬೇಕು.
ಪುಸ್ತಕದ ಹೊರೆ ಮಾತ್ರವಲ್ಲದೆ ಊಟದ ಹೊರೆಯನ್ನು ಹೊತ್ತು ಹೋಗುತ್ತಿರುವ ಮಕ್ಕಳಿಗೆ ಇದು ಮಾನಸಿಕ ಹೊರೆಯೂ ಹೌದು. ಮಕ್ಕಳಿಗೆ ಟಿಫನ್ ಬಾಕ್ಸ್ ಕೊಡುತ್ತಿರುವ ಎಷ್ಟೋ ಪೋಷಕರು ತಮಗೆ ಅರಿವಿಲ್ಲದಂತೆ ಕೆಮಿಕಲ್ ತುಂಬುತ್ತಿದ್ದಾರ. ಟಿಫನ್ ಬಾಕ್ಸ್ ಕೊಡಲು ಬಳಸುತ್ತಿರುವ ಬಾಕ್ಸ್ ಗಳು, ಅದಕ್ಕೆ ಹಾಕುತ್ತಿರುವ ಆಹಾರ ಎಲ್ಲವೂ ಕೂಡ ಮಕ್ಕಳ ಜೀವ ಹಾಗೂ ಜೀವನದ ಮೇಲೆ ಬಹಳ ದೊಡ್ಡ ದುಷ್ಪರಿಣಾಮವನ್ನು ಬೀರುತ್ತಿದೆ.
ಇದು ಹೇಗೆ ಎಂದು ನೋಡುವುದಾದರೆ ನಾವು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ನಮ್ಮ ಪರಿಸರ ಹಾಳು ಮಾಡುತ್ತಿದೆ ಮತ್ತು ಅಡುಗೆಮನೆವರೆಗೂ ಕೂಡ ಪ್ಲಾಸ್ಟಿಕ್ ಅನ್ನು ತಂದಿರುವುದು ಸ್ಲೋ ಪಾಯಿಸನ್ ಆಗಿ ನಮ್ಮ ದೇಹವನ್ನು ಕುಗ್ಗಿಸುತ್ತಿದೆ. ಬಿಸಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಹಾಕಿದಾಗ ಅದರಲ್ಲಿ ಉಂಟಾಗುವ ಕೆಮಿಕಲ್ ರಿಯಾಕ್ಷನ್ ಕ್ಯಾನ್ಸರ್ ಕಾರಕ ಎನ್ನುವುದು ಅನೇಕ ಸಂಶೋಧನೆಗಳಿಂದ ದೃಢೀಕೃತವಾಗಿದೆ.
ಆದರೆ ಈಗಿನ ಕಾಲದಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಪ್ಲಾಸ್ಟಿಕ್ ಡಬ್ಬಗಳಲ್ಲಿ ಊಟ ತುಂಬಿಸಿ ಕಳುಹಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಹಾಕಿದ ಸ್ನಾಕ್ಸ್ ಅನ್ನು ಮಕ್ಕಳು ಸಂಜೆ ನಾಲ್ಕು ಗಂಟೆ ಸಮಯಕ್ಕೆ ತಿಂದರೆ ಅವರ ಆರೋಗ್ಯ ಏನಾಗಬಹುದು ಯೋಚಿಸಿ, ಹಾಗಾಗಿ ಆದಷ್ಟು ಮಕ್ಕಳಿಗೆ ಫ್ರೆಶ್ ಆಹಾರ ಕೊಡಲು ಪ್ರಯತ್ನಿಸಿ. ನಿಮ್ಮ ಮಕ್ಕಳ ಶಾಲೆ ಹತ್ತಿರವಿದ್ದರೆ ಮಧ್ಯಾಹ್ನದ ಸಮಯ ನೀವೇ ಹೋಗಿ ಬಿಸಿ ಆಹಾರ ಕೊಟ್ಟು ಬನ್ನಿ.
ಆಹಾರ ಕೊಡಲು ಬಳಸುವ ಬಾಕ್ಸ್ ಗಳು ಆದಷ್ಟು ಸ್ಟೇನ್ಲೆಸ್ ಸ್ಟೀಲ್ ಅಥವಾ ಹಿತ್ತಾಳೆ ಅಥವಾ ಪಿಂಗಾಣಿ ಅಥವಾ ಗಾಜಿನದಾದರೂ ಪರವಾಗಿಲ್ಲ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬೇಡಿ. ಇದು ಒಂದು ವಿಚಾರವಾದರೆ ಇದರೊಳಗೆ ನಾವು ತುಂಬುತ್ತಿರುವ ಆಹಾರದ ವಿಚಾರ ಇನ್ನು ಮುಖ್ಯವಾದುದು. ಒಂದು ಮಗು ಬೆಳಿಗ್ಗೆ ಯಿಂದ ಸಂಜೆವರೆಗೆ ಶಾಲೆ ಒಳಗೆ ಕೂತಲ್ಲೇ ಕುಳಿತು ಪಾಠ ಕೇಳುತ್ತಿದೆ ಎಂದರೆ ಅದಕ್ಕೆ ನಾವು ನೀಡುವ ಆಹಾರ ಅದರ ಮಾನಸಿಕ ಆರೋಗ್ಯಕ್ಕೂ ಹಾಗೂ ದೈಹಿಕ ಆರೋಗ್ಯಕ್ಕೂ ಪೂರಕವಾಗಿರಬೇಕು.
ಅದರಲ್ಲೂ ನೀರಿನ ಅಂಶ ಹೆಚ್ಚಿರುವ ಚೆನ್ನಾಗಿ ಜೀರ್ಣ ಆಗುವ ಬಿಸಿಬೇಳೆ ಬಾತ್, ಪೊಂಗಲ್, ಕಿಚಡಿ ಈ ರೀತಿ ಆಹಾರಗಳನ್ನು ನೀಡಿದರೆ ಉತ್ತಮ. ಅದರ ಬದಲು ಹಸಿವನ್ನು ಕುಗ್ಗಿಸುವ ಜೀರ್ಣವಾಗದೆ ಕರುಳು ಕಟ್ಟುವ ಗೋಧಿ ಅಥವಾ ಮೈದಾದಿಂದ ಮಾಡಿದ ಚಪಾತಿ ಪೂರಿ ಇವುಗಳನ್ನು ನೀಡುತ್ತಿದ್ದರೆ ನಿಮ್ಮ ಮಕ್ಕಳ ಆರೋಗ್ಯ ನೀವೇ ಹಾಳು ಮಾಡುತ್ತಿದ್ದೀರಿ ಎಂದು ಅರ್ಥ.
ಮಕ್ಕಳು ಯಾವಾಗಲು ಹಸಿವಾಗಿ ಕೇಳಿ ಊಟ ಮಾಡಬೇಕು. ಅದರ ಬದಲು ಅವರಿಗೆ ಪೋಷಕರು ಎಚ್ಚರಿಸಿ, ಹೆದರಿಸಿ ಸಮಯ ಆಗಿದೆ ತಿನ್ನು ಎಂದು ಹಿಂಸೆ ಮಾಡಬಾರದು. ಒಂದೇ ಊಟದ ಬಾಕ್ಸ್ ನಲ್ಲಿ ವಿರುದ್ಧ ಆಹಾರಗಳನ್ನು ಇಟ್ಟು ಕಳುಹಿಸಲೇಬಾರದು. ಬ್ರೆಡ್, ಬನ್, ಬಿಸ್ಕೇಟ್, ಚಿಪ್ಸ್ ಇವುಗಳನ್ನು ಕೊಡುವ ಬದಲು ಹಸಿ ತರಕಾರಿಗಳು, ಹಣ್ಣುಗಳು ಇವುಗಳನ್ನು ಕೊಟ್ಟರೆ ಉತ್ತಮ.
ಇದರೊಂದಿಗೆ ಸಾಧ್ಯವಾದರೆ ಮಕ್ಕಳಿಗೆ ಆದಷ್ಟು ತಟ್ಟೆಯಲ್ಲಿಯೇ ಊಟ ಮಾಡಲು ರೂಢಿ ಮಾಡಿಸುವುದು ಕೂಡ ಬಹಳ ಒಳ್ಳೆಯದು. ಇಷ್ಟು ಬದಲಾವಣೆ ಮಾಡಿ ನೋಡಿ ನಿಮ್ಮ ಮಗು ಆರೋಗ್ಯ ಹೇಗೆ ಬದಲಾಗುತ್ತದೆ ಎಂದು. ಮಕ್ಕಳಿಗೆ ಶಾಲೆಗೆ ಹೋಗುವ ವಯಸಿನಲ್ಲಿ ಏನು ಕಲಿಸುತ್ತೇವೆ ಅವರು ಜೀವನಪೂರ್ತಿ ಅದೇ ರೀತಿ ಬದುಕುತ್ತಾರೆ ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಈ ಒಳ್ಳೆಯ ಆಹಾರ ಪದ್ಧತಿ ರೂಢಿಸಿ.