ಸಾಮಾನ್ಯವಾಗಿ ಇಂದು ಪೆಟ್ರೋಲ್ ಡೀಸೆಲ್ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದ್ದು ಇದರ ನಡುವೆ ಬಂಕ್ ಗಳಲ್ಲಿ ಗ್ರಾಹಕರಿಗೆ ಮೋಸಗೊಳಿಸುವ ಸಂಗತಿಗಳು ಕೂಡ ಬೆಳಕಿಗೆ ಬರುತ್ತಿರುವ ಘಟನೆಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಇಲೆಕ್ಟ್ರಾನಿಕ್ ಡಿಜಿಟಲ್ ಸಿಸ್ಟಮ್ ಬಂದಿದ್ದರೂ ಸಹ ಅದರಲ್ಲಿಯೂ ಮೋಸ ಮಾಡುವ ಕೆಲವು ಖದೀಮರು ನಿಸ್ಸೀಮರಾಗಿದ್ದಾರೆ.ಡಿಜಿಟಲ್ ಮೀಟರ್ ಅನ್ನು ಟ್ಯಾಂಪರ್ ಮಾಡುವುದು, ಪೆಟ್ರೋಲ್ ಕೊಳವೆಯನ್ನು ಉದ್ದ ಇರುವಂತೆ ಮಾಡಿ ಕಡಿಮೆ ಪೆಟ್ರೋಲ್ ಹಾಕಿ ಮೋಸಗೊಳಿಸುವುದು ಸಾಮಾನ್ಯವಾಗಿ ಹೋಗಿದ್ದು ಈ ಸಂಗತಿಗಳು ಕೆಲವರಿಗೆ ತಿಳಿಯದೇ ಇರುವುದು ಸಹ ಅರಿವಾಗುತ್ತದೆ. ಕಲಬೆರಕೆ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟ ಮಾಡಿ ಲಾಭ ಗಳಿಸುವುದು ಸಹ ಬಂಕ್ ಮಾಲೀಕರಿಗೆ ರೂಡಿ ಆಗಿ ಹೋಗಿದೆ. ಈ ಮೋಸಗಳನ್ನು ತಪ್ಪಿಸಲು ಗ್ರಾಹಕರು ಮೋಸದ ಜಾಲಗಳನ್ನು ಅರಿತುಕೊಂಡು ಮತ್ತೊಮ್ಮೆ ಮೋಸ ಹೋಗದಂತೆ ಎಚ್ಚರ ವಹಿಸಬೇಕಾಗಿದೆ.
ಪೆಟ್ರೋಲ್ ಪಂಪ್ ಉದ್ದವಿರುವ ಕಾರಣದಿಂದ ಮೀಟರ್ ನಲ್ಲಿ ಸರಿಯಾಗಿ ತೋರಿಸಿದರು ಸಹ ಉದ್ದವಿರುವ ಪೈಪಿನಲ್ಲಿ ಕನಿಷ್ಠ 100 ಮಿಲಿ ಆದರೂ ಪೆಟ್ರೋಲ್ ಉಳಿದು ಬಂಕ್ ಮಾಲೀಕರಿಗೆ ಲಾಭದಾಯಕವಾಗುತ್ತದೆ. ಇಂತಹ ಮೋಸವನ್ನು ತಡೆಗಟ್ಟಲು ಗ್ರಾಹಕರು ಒಮ್ಮೆ ಸರಿಯಾಗಿ ಪೈಪಿನಲ್ಲಿರುವ ಪೆಟ್ರೋಲ್ ಪೂರ್ತಿಯಾಗಿ ಪೆಟ್ರೋಲ್ ಟ್ಯಾಂಕಿಗೆ ಬಿದ್ದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ನಾವು ಪೆಟ್ರೋಲ್ ಮೀಟರ್ ನೋಡುತ್ತಿರುವಾಗ ನಮ್ಮ ದಿಕ್ಕು ತಪ್ಪಿಸಿ ತಮ್ಮ ಮೋಸಗಳು ಬಯಲಾಗದಂತೆ ನಮ್ಮ ಬುದ್ಧಿಗೆ ಮಂಕು ಮಸಿ ಬಳಿಯುತ್ತಾರೆ. ಹಾಗಾಗಿ ಒಂದು ವೇಳೆ ಪೆಟ್ರೋಲ್ ಬಂಕಿನ ಸಿಬ್ಬಂದಿಗಳು ಮೀಟರ್ ಗೆ ಅಡ್ಡಲಾಗಿ ಬಂದರೆ ಅವರನ್ನು ದೂರ ಸರಿಯುವಂತೆ ಹೇಳಿ ನಮ್ಮ ಬುದ್ಧಿವಂತಿಕೆಯನ್ನು ಉಳಿಸಿಕೊಳ್ಳಬೇಕು.
ಸರ್ಕಾರ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿ ಜನರ ಮೇಲೆ ಬಾರ ಹೊರಿಸಿದರೆ ಇದರ ಜತೆಗೆ ಪೆಟ್ರೋಲ್ ಬಂಕ್ ಮಾಲೀಕರು ಈ ರೀತಿಯಾಗಿ ಜನರಿಗೆ ಮೋಸ ಮಾಡುತ್ತಾರೆ. ಪೆಟ್ರೋಲ್, ಡೀಸೆಲ್ ತುಂಬುವ ಮೊದಲು ರೀಡಿಂಗ್ ಅನ್ನು ಸೊನ್ನೆ ಮಾಡಿರುತ್ತಾರೆ ಆದರೆ ನಮ್ಮ ಮುಂದೆ ರೀಡಿಂಗ್ ಸೊನ್ನೆ ಮಾಡಿ ಸ್ವಲ್ಪ ಇಂಧನ ತುಂಬಿಸಿ ನಮ್ಮ ಗಮನವನ್ನು ಬೇರೆಡೆ ಸೆಳೆದು ರೀಡಿಂಗ್ ಅನ್ನು ಬದಲಾಯಿಸುತ್ತಾರೆ. ಜತೆಗೆ ಇಂಧನವನ್ನು ಕಡಿಮೆ ತುಂಬುತ್ತಾರೆ. ಇದರಿಂದ ಎಚ್ಚರಿಕೆಯಿಂದ ನಾವು ನಮ್ಮ ದೃಷ್ಠಿಯನ್ನು ಬೇರೆಕಡೆ ಮಾಡದೆ ರೀಡಿಂಗ್ ಗಮನಿಸಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಪಕ್ಕ.
ಬಂಕ್ಗಳಲ್ಲಿ ಇಂಧನ ತುಂಬುವ ವೇಳೆಯಲ್ಲಿ ಪದೇ ಪದೇ ನಾಜಲ್ ಒತ್ತುತ್ತಾರೆ. ಜನರು ರೀಡಿಂಗ್ ಮೇಲೆ ಗಮನಹರಿಸಿರುವಾಗ ಈ ಕೆಲಸವನ್ನು ಮಾಡುತ್ತಾರೆ. ಈ ನಾಜಲ್ ಒತ್ತುವುದರಿಂದ ಇಂಧನ ಕಡಿಮೆ ಬರುತ್ತದೆ. ದ್ವಿಚಕ್ರ ವಾಹನಗಳಲ್ಲದೆ ಕಾರನ್ನು ಹೊಂದಿರುವವರು ವಾಹನದಿಂದ ಕೆಳಗಿಳಿಯದೆ ಇಂಧನ ತುಂಬಿಸಿಕೊಳ್ಳುತ್ತಾರೆ. ಇದರಿಂದ ಇಂಧನ ತುಂಬುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ ಹೆಚ್ಚಿನ ಇಂಧನವನ್ನು ಉಳಿಸಿಕೊಳ್ಳಲು ಆವರಿಗೆ ಅವಕಾಶ ಸಿಗುತ್ತದೆ. ಹಾಗಾಗಿ ಗ್ರಾಹಕರು ಇಂಧನವನ್ನು ತುಂಬಿಸುವ ವೇಳೆ ವಾಹನದಿಂದ ಕೆಳಗೆ ಇಳಿದು ಸರಿಯಾಗಿ ಪರೀಕ್ಷಿಸಿ ಇಂಧನವನ್ನು ತುಂಬಿಸಿಕೊಳ್ಳಬೇಕು. ರಿಮೋಟ್ ಕಂಟ್ರೋಲ್ ನಲ್ಲಿಯೂ ಸಹ ರಿಮೋಟ್ ಚಿಪ್ ಗಳನ್ನು ಬಳಸಿ ಗ್ರಾಹಕರನ್ನು ಡಿಜಿಟಲ್ ನಿಂದ ವಂಚಿಸುತ್ತಾರೆ. ಈ ರಿಮೋಟ್ ಮೂಲಕ ಪೆಟ್ರೋಲ್ ಬಂಕ್ನ ಫ್ಯೂಲ್ ಯೂನಿಟ್ಗಳನ್ನು ನಿಯಂತ್ರಿಸುವ ಮಾಲೀಕರು ಬೈಕ್ ಸವಾರರಿಗಿಂತ 1 ಸಾವಿರ, 2 ಸಾವಿರ ರೂಪಾಯಿ ಲೆಕ್ಕದಲ್ಲಿ ಡೀಸೆಲ್, ಪೆಟ್ರೋಲ್ ತುಂಬಿಸುವ ಕಾರು ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಾರೆ.
ಬೈಕ್ಗಳಿಗೆ ಪೆಟ್ರೋಲ್ ತುಂಬಿಸುವಾಗ ಮೋಸ ಮಾಡಿದ್ದಲ್ಲಿ ಮಾಲೀಕರಿಗೆ ಇದು ಗೊತ್ತಾಗಬಹುದಾದ ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ತುಂಬಿಸುವಾಗ ಮಾತ್ರ ರಿಮೋಟ್ ಕಂಟ್ರೋಲ್ ಬಳಕೆ ಮಾಡಿ ಇಂಧನ ಪ್ರಮಾಣದಲ್ಲಿ ಕಡಿತ ಮಾಡುತ್ತಾರೆ. ಅದು ಹೇಗೆ ಅಂದ್ರೆ, ನೀವು ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿದ್ದರೆ ನಿಮ್ಮ ವಾಹನದಲ್ಲಿ ಕೇವಲ 900ಮಿ. ಲೀಟರ್ ಮಾತ್ರ ತುಂಬಿಕೊಳ್ಳುತ್ತದೆ. ಆದರೆ ಮೀಟರ್ನಲ್ಲಿ ಮಾತ್ರ 1 ಲೀಟರ್ ಹಾಕಿದ್ದಾಗಿ ಲೆಕ್ಕ ತೋರಿಸುತ್ತದೆ. ಕರ್ನಾಟಕದಲ್ಲೂ ಸಹ ಸುಮಾರು 2 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳಲ್ಲಿ ಈ ರೀತಿಯಾಗಿ ಮೋಸ ನಡೆಯುತ್ತಿದೆ. ಸಾಮಾನ್ಯವಾಗಿ ನೀವು ಪೆಟ್ರೋಲ್ ತುಂಬಿಸಿದ ದಿನ ಅಥವಾ ಮರುದಿನ ನಿಮ್ಮ ಗಾಡಿಯ ಮೈಲೇಜ್ ನ ಆಧಾರದಲ್ಲಿ ಏರುಪೇರಾಗಿರುವುದು ಕಂಡುಬಂದಲ್ಲಿ ಕೂಡಲೇ ಪೆಟ್ರೋಲ್ ಬಂಕಿಗೆ ತೆರಳಿ, ಅಲ್ಲಿ 5 ಲೀಟರ್ ಮಾಪನ ಪರೀಕ್ಷೆ ಮಾಡಿ ಎಂದು ಆಗ್ರಹ ಮಾಡಿ.
ಯಾವ ಗ್ರಾಹಕರೇ ಕೇಳಿದರೂ ಪೆಟ್ರೋಲ್ ಬಂಕ್ ಗಳಲ್ಲಿ ತೂಕ ಮತ್ತು ಅಳತೆಯ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 5 ಲೀಟರ್ ಮಾಪನ ಸಾಧನ ಇಟ್ಟಿರಲೇ ಬೇಕು. ಈ ಯಂತ್ರಕ್ಕೆ 5 ಲೀಟರ್ ಇಂಧನವನ್ನು ತುಂಬಿಸಿ ಎಂದು ಆದೇಶಿಸಿ. ಇಂಧನವನ್ನು ಯಂತ್ರದಲ್ಲಿ ತುಂಬಿಸಿದಾಗ ಸರಿಯಾಗಿ 5 ಲೀಟರ್ಗೆ ಬಂದು ನಿಂತುಕೊಳ್ಳಬೇಕು ಇಲ್ಲವಾದಲ್ಲಿ ಆ ಪೆಟ್ರೋಲ್ ಬಂಕಿನಲ್ಲಿ ಅಳತೆಯಲ್ಲಿ ಮೋಸ ನಡೆಯುತ್ತಿದೆ ಎಂದರ್ಥ. ಹಾಗೆಯೇ ಅವರು ಮಾಪನ ಪರೀಕ್ಷೆ ಮಾಡುವುದಕ್ಕೆ ನಿರಾಕರಿಸಿದರೆ ನೀವು ಅವರ ವಿರುದ್ದ ದೂರು ನೀಡಬಹುದು. 1986 ರ ಗ್ರಾಹಕ ಸಂರಕ್ಷಣಾ ಕಾಯ್ದೆ ಯ ಪ್ರಕಾರ ಪ್ರತಿಯೊಂದು ಪೆಟ್ರೋಲ್ ಬಂಕ್ ಗಳಲ್ಲಿಯೂ ಫಿಲ್ಟರ್ ಪೇಪರ್ ಗಳನ್ನು ಇಟ್ಟಿರುವುದಲ್ಲದೆ ಪರೀಕ್ಷೆಗೆ ಗ್ರಾಹಕರು ಅಗ್ರಹಿಸಿದರೆ ಕೂಡಲೇ ಅವರು ಟೆಸ್ಟ್ ಮಾಡಲೇಬೇಕು. ನಿಮ್ಮ ವಾಹನ ಇದ್ದಕ್ಕಿದ್ದಂತೆ ವಿಚಿತ್ರ ಶಬ್ದ ಅಥವಾ ತರಂಗಗಳನ್ನು ಹೊರ ಹಾಕಿದ್ದಲ್ಲಿ ಕೂಡಲೇ ಫಿಲ್ಟರ್ ಪೇಪರ್ ತೆಗೆದುಕೊಂಡು ಪೆಟ್ರೋಲ್ ಹನಿಗಳನ್ನು ಅದರ ಮೇಲೆ ಹಾಕಿ. ಒಂದು ವೇಳೆ ಪೆಟ್ರೋಲ್ ಅಶುದ್ದವಾಗಿರದೇ ಇದ್ದರೇ ಅದು ಫಿಲ್ಟರ್ ಪೇಪರ್ ಮೇಲೆ ಕೆಲವೊಂದು ಕಲೆಗಳನ್ನು ಉಳಿಸುತ್ತದೆ. ಅದೇ ಶುದ್ಧವಾಗಿದ್ದರೆ ಯಾವುದೇ ಕಲೆಗಳು ಅಲ್ಲಿರುವುದಿಲ್ಲ. ಇದರಿಂದ ಬಂಕ್ ಮಾಲೀಕರ ವಂಚನೆ ಬಯಲಾಗುತ್ತದೆ.