ಆಸ್ತಿಯನ್ನು ದಾನ, ಕ್ರಯ ಮತ್ತು ವಿಭಾಗದ ಮೂಲಕ ನೀಡುವುದು ಮಾತ್ರವಲ್ಲದೆ ವಿಲ್ ಬರೆದು ಕೂಡ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಾರ್ಜಿತ ಆಸ್ತಿಗೆ ವಿಲ್ ಬರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿ ತನ್ನ ನಂತರ ಯಾರಿಗೆ ಹೋಗಬೇಕು ಎಂದು ಆತ ಇಷ್ಟ ಪಟ್ಟ ಕುಟುಂಬಸ್ಥರಿಗೆ ಅಥವಾ ಬೇರೆ ಯಾರಿಗಾದರೂ ಕೂಡ ಬರೆಯಬಹುದು.
ಆತನ ಮ’ರ’ಣ’ದ ನಂತರ ಮಾತ್ರ ಅದರಲ್ಲೂ ಆತ ಕೊನೆಯ ಬಾರಿಗೆ ಬರೆದ ವಿಲ್ ನಲ್ಲಿ ಯಾರಿಗೆ ಬರೆದಿರುತ್ತಾರೆ ಅವರಿಗೆ ಆಸ್ತಿಯ ಆ ಹಕ್ಕು ವರ್ಗಾವಣೆ ಆಗುತ್ತದೆ. ಆದ್ದರಿಂದ ದಿನಾಂಕ ಹಾಗೂ ಯಾವ ಆಸ್ತಿಯನ್ನು ವಿಲ್ ಮಾಡುತ್ತಿದ್ದಾರೆ ಎನ್ನುವ ಅಂಶವನ್ನು ತಪ್ಪದೇ ವಿಲ್ ನಲ್ಲಿ ಬರೆಸಬೇಕು.
ಆದರೆ ಕೆಲವು ಪ್ರಕರಣಗಳಲ್ಲಿ ಪಿತ್ರಾರ್ಜಿತ ಆಸ್ತಿಗೂ ಕೂಡ ವಿಲ್ ಬರೆಸಿರುವ ಉದಾಹರಣೆಗಳು ಇವೆ. ಪಿತ್ರಾರ್ಜಿತ ಆಸ್ತಿ ಯನ್ನು ತಮ್ಮ ರಕ್ತ ಸಂಬಂಧಿಕರಿಗೆ ಅಥವಾ ಬೇರೆಯವರಿಗೆ ವಿಲ್ ಬರೆದು ವಿಲೆ ಮಾಡಿದರೆ ಆ ಪಿತ್ರಾರ್ಜಿತ ಆಸ್ತಿಗೆ ಭಾಗಿದಾರರಾಗಿದ್ದವರು ತಮ್ಮ ಪಾಲಿಗೆ ಬರಬೇಕಾದದ್ದನ್ನು ಕೇಳಲು ಅವಕಾಶಗಳು ಇಲ್ಲವೇ ಎನ್ನುವುದು ಅನೇಕ ಗೊಂದಲವಾಗಿದೆ.
ಇದಕ್ಕೆ ಸಂಬಂಧ ಪಟ್ಟ ಹಾಗೆ ಕಾನೂನಿನಲ್ಲಿ ಏನಿದೆ ಎನ್ನುವ ಪ್ರಮುಖ ಅಂಶವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಪಿತ್ರಾರ್ಜಿತ ಆಸ್ತಿಗೆ ವಿಲ್ ಮಾಡಿದರೆ ಎಲ್ಲಾ ಸಂದರ್ಭದಲ್ಲೂ ಕೂಡ ಅದು ಸಿಂಧುವಾಗುವುದಿಲ್ಲ. ಹಾಗೆಯೇ ಎಲ್ಲಾ ಪ್ರಕರಣಗಳಲ್ಲೂ ಅಸಿಂಧು ಆಗುವುದಿಲ್ಲ. ಪ್ರಕರಣದಲ್ಲಿರುವ ಅಂಶಗಳ ಆಧಾರದ ಮೇಲೆ ಅದು ನಿರ್ಧಾರ ಆಗುತ್ತದೆ.
ಹಿಂದೂ ಉತ್ತರಾದಿತ್ವದ ಕಾಯಿದೆ 1956 ರ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಒಬ್ಬ ತಂದೆಯ ಎಲ್ಲ ಮಕ್ಕಳು ಕೂಡ ಸಮಾನ ಭಾಗಿದಾರರಾಗಿರುತ್ತಾರೆ. ಇದನ್ನು ಇನ್ನು ಸ್ಪಷ್ಟವಾಗಿ ಹೇಳಬೇಕು ಎಂದರೆ ತಂದೆಗೆ ಆತನ ತಂದೆಯಿಂದ 100 ರೂಪಾಯಿ ಬಂದಿದೆ ಎಂದರೆ ಆ 100 ರುಪಾಯಿ ತಂದೆಯ ಜೇಬಿನಲ್ಲೇ ಇದ್ದರೂ ಆತನಿಗೆ ಮಗ ಹುಟ್ಟಿದ ನಂತರ ಅದರಲ್ಲಿ 50 ರೂಪಾಯಿಗೆ ಮಾತ್ರ ಅವರು ಪಾಲುದಾರರು.
ಉಳಿದ ರೂ.50 ಆತನ ಮೊದಲ ಮಗನಿಗೆ. ಒಂದು ವೇಳೆ ಇಬ್ಬರು ಮಕ್ಕಳಾದರೆ ಅದು ಮೂರು ಭಾಗವಾಗುತ್ತದೆ. ಹೆಣ್ಣಾಗಲಿ ಗಂಡಾಗಲಿ ಒಟ್ಟು ನಾಲ್ಕು ಜನ ಮಕ್ಕಳಾದಾಗ ತಂದೆಗೂ ಸೇರಿ ಪಿತ್ರಾಜಿತ ಆಸ್ತಿ ಐದು ಭಾಗ ಆಗುತ್ತದೆ ಅಂದರೆ ಆ 100 ರುಪಾಯಿ ಈಗ ನಾಲ್ಕು ಮಕ್ಕಳಿಗೆ ತಲಾ 20 ರೂಪಾಯಿ ಮತ್ತು ತಂದೆಗೆ 20 ರೂಪಾಯಿ ಆಗುತ್ತದೆ ಎಂದು ಕೊಳ್ಳೋಣ.
ಈಗ ತಂದೆ ಹೆಸರಿನಲ್ಲಿ ಪಿತ್ರಾರ್ಜಿತವಾಗಿ ಬಂದ 10 ಎಕರೆ ಆಸ್ತಿ ಇದೆ ಎಂದುಕೊಳ್ಳೋಣ. ಅದು ಈ ಮೇಲೆ ತಿಳಿಸಿದ ರೀತಿ ಎಲ್ಲರಿಗೂ ತಲಾ 2 ಎಕರೆ ವರ್ಗಾವಣೆ ಆಗುತ್ತದೆ, ಈ ಆಸ್ತಿಯಲ್ಲಿ ತನ್ನ ಪಾಲಿಗೆ ಬಂದ 2 ಎಕರೆ ಆಸ್ತಿಯನ್ನು ತಮ್ಮ ನಂತರ ತಮ್ಮ ಯಾವ ಮಕ್ಕಳಿಗೂ ಹೋಗಬೇಕು ಎಂದು ವಿಲ್ ಮಾಡಿದ್ದರೆ ಅದು ಸಿಂಧು ಆಗುತ್ತದೆ.
ಒಂದು ವೇಳೆ ಅವರು ಒಟ್ಟು 10 ಎಕರೆ ಅಥವಾ ತಮ್ಮ ಪಾಲಿನ 2 ಎಕರೆಗಿಂತ ಹೆಚ್ಚು ಆಸ್ತಿಯನ್ನು ಯಾರಿಗಾದರೂ ಒಬ್ಬರಿಗೆ ಪೂರ್ತಿ ಆಸ್ತಿ ತಮ್ಮ ಹೆಸರಿನಲ್ಲಿಯೇ ಇತ್ತು ಎನ್ನುವ ಕಾರಣಕ್ಕೆ ವಿಲ್ ಮೂಲಕ ಬರೆದಿದ್ದರೆ ಅದು ಅಸಿಂಧುವಾಗುವ ಸಾಧ್ಯತೆಗಳು ಹೇರಳವಾಗಿವೆ. ಇದಕ್ಕೆ ಇನ್ನಷ್ಟು ಸ್ಪಷ್ಟನೆ ಹಾಗೂ ಕಾನೂನಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರ ಆಥವಾ ವಕೀಲರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.