ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್ ಗ್ಯಾರಂಟಿಗಳು ಚುನಾವಣೆಯಲ್ಲಿ ಸಖತ್ ವರ್ಕ್ ಆಗಿರುವ ರೀತಿ ಕಾಣುತ್ತಿವೆ. ಮೊದಲ ಕ್ಯಾಬಿನೆಟ್ನಲ್ಲಿಯೇ ಕಾಂಗ್ರೆಸ್ ತನ್ನೆಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆಯನ್ನು ನೀಡಿತ್ತು. ಪ್ರಮುಖವಾಗಿ ಉಚಿತ ವಿದ್ಯುತ್, ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಭರವಸೆ ಜನರನ್ನು ತಲುಪಿದ್ದು, ಜನರಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ.
5 ಗ್ಯಾರಂಟಿ ಯೋಜನೆಗಳು ಯಾವುವು?
• 200 ಯೂನಿಟ್ ವಿದ್ಯುತ್ ಉಚಿತ.
• ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
• ಅನ್ನಭಾಗ್ಯ ಯೋಜನೆ 10 ಕೆಜಿ.
• ಯುವನಿಧಿ 3000ರೂಪಾಯಿ.
• ರಾಜ್ಯದ ಪ್ರತಿ ಮಹಿಳೆಯರಿಗೆ 2000 ಪ್ರತಿ ತಿಂಗಳಿಗೆ.
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಮೊದಲ ಗ್ಯಾರಂಟಿಯನ್ನು ಕಾಂಗ್ರೆಸ್ ಘೋಷಿಸಿತ್ತು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ತನ್ನ ಮೊದಲ ಗ್ಯಾರಂಟಿಯನ್ನು ಘೋಷಣೆ ಮಾಡಿತ್ತು. ಈ ಮೂಲಕ ಜನಸಾಮಾನ್ಯರು ಹಾಗೂ ಬಡವರ ಗಮನ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿತ್ತು. ಈಗ ಅದಕ್ಕೆ ಫಲ ಸಿಕ್ಕಿದೆ.
ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ.
ಇನ್ನು, ಕಾಂಗ್ರೆಸ್ ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವುದಾಗಿ ಎರಡನೇ ಗ್ಯಾರಂಟಿಯನ್ನು ಘೋಷಿಸಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರಿಂದ ಈ ಘೋಷಣೆ ಮಾಡಿಸಿದ್ದ ಕಾಂಗ್ರೆಸ್ ಮಹಿಳಾ ಮತದಾರರನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಬೆಲೆ ಏರಿಕೆಯಿಂದ ಮಹಿಳೆಯರು ತತ್ತರಿಸಿದ್ದರು. ಪ್ರತಿ ತಿಂಗಳು 2000 ರೂ. ಅನ್ನು ಮನೆ ಯಜಮಾನಿಗೆ ನೀಡುತ್ತೇವೆ ಎಂದು ಹೇಳಿ ಮಹಿಳಾ ಮತದಾರರ ಮನಗೆಲ್ಲುವ ಪ್ರಯತ್ನವನ್ನು ನಡೆಸಿದ್ದ ಕಾಂಗ್ರೆಸ್ ಯಶಸ್ವಿಯಾಗಿದೆ. ಅದಲ್ಲದೇ ಮಹಿಳೆಯರಿಗೆ ಉಚಿತ ಸಾರಿಗೆಯನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್ ಮಹಿಳಾ ಮತದಾರರ ಮೆಚ್ಚುಗೆಗೆ ಕಾರಣವಾಗಿದ್ದು, ಅದು ಮತಗಳಾಗಿ ಪರಿವರ್ತನೆ ಆಗಿದೆ.
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ
ಅನ್ನ ಭಾಗ್ಯ ಯೋಜನೆಯ ಕಾಂಗ್ರೆಸ್ ಅನ್ನು ಮತ್ತೊಂದು ಬಾರಿ ಅಧಿಕಾರಕ್ಕೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಯಾಗಿತ್ತು. ಈ ಬಾರಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಪ್ರತಿಯೊಬ್ಬರಿಗೂ ಉಚಿತ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಘೋಷಿಸಿತ್ತು. ಈ ಮೂಲಕ ಬಡವರ ಮತಗಳನ್ನು ಸೆಳೆಯುವ ಕಾಂಗ್ರೆಸ್ ಪ್ರಯತ್ನ ಭಾರೀ ದೊಡ್ಡ ಮಟ್ಟದ ಫಲ ನೀಡಿದೆ.
ಇನ್ನು, ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗ ಡಿಪ್ಲೋಮಾ ಪದವೀಧರರಿಗೆ 1,500 ರೂ. ಅನ್ನು ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆ ಮೂಲಕ ಯುವ ಮತದಾರರನ್ನು ಕಾಂಗ್ರೆಸ್ ತಲುಪಿರುವುದು ಫಲಿತಾಂಶದಲ್ಲಿ ಕಂಡುಬರುತ್ತಿದೆ. ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ ಮಾಡುವ ಭರವಸೆಯನ್ನು ಕೂಡ ಕಾಂಗ್ರೆಸ್ ನೀಡಿದ್ದರಿಂದ ಅವು ಕೂಡ ಮತಗಳಾಗಿ ಪರಿವರ್ತನೆಯಾಗಿರುವುದು ಕಂಡುಬಂದಿದೆ.
ಜನರಿಗೆ ಭರವಸೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಮೊದಲ ಕ್ಯಾಬಿನೇಟ್ ನಲ್ಲೇ ಈಡೇರಿಸುವಂತೆ ಹಿರಿಯ ನಾಯಕ ಖರ್ಗೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಜನರು ಸಂವಿಧಾನದ ರಕ್ಷಣೆಗೆ ಮತ ನೀಡಿದ್ದಾರೆ. ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. ಇದು ಒಳ್ಳೆಯ ಸಮಯ, ನಾವು ಇದನ್ನು ಉಳಿಸಿಕೊಳ್ಳಬೇಕು, ರಾಜ್ಯದಲ್ಲಿ ಪಕ್ಷ ಗಟ್ಟಿಯಾಗಿ ನೆಲೆಯೂರಬೇಕು ಎಂದು ಖರ್ಗೆ ರಾಜ್ಯ ನಾಯಕರಿಗೆ ಸೂಚಿಸಿದರು.