ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಸ್ಥಾಪನೆಯಾಗಿದೆ. ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿರುವ ವಂತಿಗೆ ಪಾವತಿಸುವ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ವಲಯದ ಕಾರ್ಮಿಕರು. ಅವರ ಕುಟುಂಬದ ಅವಲಂಬಿತರ ಕ್ಷೇಮಾಭಿವೃದ್ಧಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಹಾಯಧನ ನೀಡುವುದು ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಈ ಯೋಜನೆಗಳಿಗೆ ಅರ್ಹರು ಅರ್ಜಿ ಸಲ್ಲಿಸುವ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಯಾವೆಲ್ಲಾ ಯೋಜನೆಗಳು ಜಾರಿಯಲ್ಲಿವೆ ಮತ್ತು ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆಗಳ ವಿವರ:-
* 60 ವರ್ಷ ಪೂರೈಸಿರುವ ಮತ್ತು ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿ ಮೂರು ವರ್ಷಗಳನ್ನು ಪೂರೈಸಿರುವ ಕಾರ್ಮಿಕನು ಪ್ರತಿ ತಿಂಗಳು ರೂ.3000 ಪಿಂಚಣಿ ಪಡೆಯಬಹುದು.
* ಮಂಡಳಿಯಲ್ಲಿ ನೋಂದಣಿಯಾಗಿ ಕಾರ್ಮಿಕ ಕಾರ್ಡ್ ಪಡೆದಿರುವವರು ಕಾರ್ಮಿಕ ಕಾರ್ಡ್ ನಿಂದ ಅಪಘಾತ ಪರಿಹಾರ 2 ಲಕ್ಷ ರೂ.ಗಳ ಪರಿಹಾರ ಸಹಾಯಧನ ಪಡೆಯಬಹುದು ಮತ್ತು ಕಾರ್ಮಿಕ ಕಾರ್ಡ್ ನಿಂದ ವೈದ್ಯಕೀಯ ಸಹಾಯಧನ ಪ್ರತಿ ದಿನಕ್ಕೆ 300 ರೂ ನಂತೆ ಗರಿಷ್ಠ ರೂ.20,000 ಸಹಾಯಧನ ಪಡೆಯಬಹುದು. ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಅವಲಂಬಿತರ ಗಂಭೀರ ಖಾಯಿಲೆಗಳ ವೆಚ್ಚಕ್ಕಾಗಿ ಗರಿಷ್ಠ ರೂ.2 ಲಕ್ಷಗಳವರೆ ಧನ ಸಹಾಯ ಸಿಗುತ್ತದೆ.
* ಕಾರ್ಮಿಕ ಕಾರ್ಡ್ ನಿಂದ ತಾಯಿ ಮಗು ಸಹಾಯ ಹಸ್ತ ಯೋಜನೆಯಡಿ ರೂ.6000 ಮತ್ತು ಪ್ರತಿ ತಿಂಗಳು 500ರೂ. ನಂತೆ ನೋಂದಾಯಿತ ಮಹಿಳಾ ಫಲಾನುಭವಿಗೆ ಸಹಾಯಧನ ಪಡೆಯಬಹುದು.
* ನೋಂದಾಯಿತ ಮಹಿಳಾ ಕಾರ್ಮಿಕರ ಗಂಡು ಅಥವಾ ಹೆಣ್ಣು ಮಗುವಿನ ಜನನಕ್ಕೆ ರೂ.50,000 ರೂ ಮೌಲ್ಯದ ತಾಯಿ ಲಕ್ಷ್ಮಿ ಬಾಂಡ್ ಸಹಾಯ ಧನ ಮೊದಲ ಎರಡು ಹೆರಿಗೆಗೆ ಸಿಗುತ್ತದೆ.
* ಕಾರ್ಮಿಕರ ಮೊದಲ ಮದುವೆಗೆ ಅಥವಾ ಕಾರ್ಮಿಕರ ಅವಲಂಭಿತರ ಮದುವೆಗೆ ಗೃಹಲಕ್ಷ್ಮಿ ಬಾಂಡ್ ಯೋಜನೆಯಡಿ ರೂ.60,000 ಸಹಾಯಧನ ಸಿಗುತ್ತದೆ.
* ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವಿಗಾಗಿ ಶೈಕ್ಷಣಿಕ ಧನಸಹಾಯ ಸಿಗುತ್ತದೆ. ನರ್ಸರಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಪಡೆಯಬಹುದು. ಜೊತೆಗೆ ಉಚಿತ ವಿದ್ಯಾರ್ಥಿ ಕಿಟ್ ಉಚಿತ ಲ್ಯಾಪ್ಟಾಪ್ ಸೌಲಭ್ಯಗಳು ಇರುತ್ತವೆ.
* ನೋಂದಾಯಿತ ಕಾರ್ಮಿಕ ಅಥವಾ ಕಾರ್ಮಿಕಳಿಗೆ ನಿರ್ಮಾಣ ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವರಿಗೆ ಸರ್ಕಾರದ ಅಧಿಸೂಚನೆಯಂತೆ ರೂ.2000 ರೂ.ಗಳ ದುರ್ಬಲತೆ ಪಿಂಚಣಿ ಪ್ರತಿ ತಿಂಗಳು ಸಿಗುತ್ತದೆ.
* ಕಟ್ಟಡ ಕಾರ್ಮಿಕನು ಮ’ರ’ಣಕ್ಕೀಡಾದಾಗ ಅಂ’ತ್ಯ’ಕ್ರಿ’ಯೆ ವೆಚ್ಚವನ್ನು ಭರಿಸಲು ರೂ.4000 ಗಳ ಹಾಗೂ ಮರಣದಿಂದ ಕುಟುಂಬಕ್ಕಾಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಕೂಲವಾಗಲೆಂದು ರೂ.71,000 ಗಳನ್ನು ನಾಮಿನಿಗೆ ನೀಡಲಾಗುತ್ತದೆ.
* ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು ಪ್ರಯಾಣಿಸಲು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೂಡ ಸಿಗುತ್ತದೆ.
ಬೇಕಾಗುವ ದಾಖಲೆಗಳು:-
* ಕಾರ್ಮಿಕರ ಆಧಾರ್ ಕಾರ್ಡ್
* ಕಟ್ಟಡ ಕಾರ್ಮಿಕರ ಸರ್ಟಿಫಿಕೇಟ್
* ನಾಮಿನಿ ಹೆಸರು
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್
* ಪಾಸ್ಪೋರ್ಟ್ ಸೈಜ್ ಫೋಟೋ
* ಮೊಬೈಲ್ ಸಂಖ್ಯೆ.
ಅರ್ಜಿ ಸಲ್ಲಿಸುವ ವಿಧಾನ:-
* ಯಾವುದೇ CSC ಸೇವಾ ಕೇಂದ್ರ, ಗ್ರಾಮಒನ್ ಸೇವಾ ಕೇಂದ್ರ, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಸೇವಾ ಸಿಂಧು ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.