ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಶುಕ್ರವಾರ ಹೊರಡಿಸಿರುವ ಹೊಸ ಆದೇಶದ ಮೇಲೆ ನಾಡಿನ ರೈತ ವರ್ಗದಿಂದ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೊಸ ಆದೇಶದ ಪ್ರಕಾರ ಎಸ್ಕಾಂ ಗಳು ರಾಜ್ಯದಲ್ಲಿ ನೀರಾವರಿ ರೈತರ ಪಂಪ್ಸೆಟ್ಗಳಲ್ಲಿ ಅಳವಡಿಸಿರುವ RR ಸಂಖ್ಯೆಯನ್ನು ಆ ರೈತರ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು ಎನ್ನುವ ಆದೇಶವನ್ನು ಹೊರಡಿಸಿದೆ. ಇಲ್ಲವಾದಲ್ಲಿ ಎಸ್ಕಾಂಗಳಿಗೆ ಬಿಡುಗಡೆ ಆಗುತ್ತಿರುವ ಸಹಾಯಧನವನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಹೊಸ ವಿದ್ಯುತ್ ಪರೀಷ್ಕರಣೆ ಆದೇಶದಲ್ಲಿ ಇಂತಹ ಒಂದು ಷರತನ್ನು ವಿಧಿಸಿ ಇದಕ್ಕೆ ಆರು ತಿಂಗಳುಗಳ ಗಡುವನ್ನು ಮಾತ್ರ ನೀಡಿದೆ. ಇದರಿಂದ ರೈತ ವಲಯಕ್ಕೆ ಅನ್ಯಾಯವಾಗುತ್ತದೆ ಎಂದು ರೈತರು ಸಿಡಿದಿದ್ದಾರೆ ಮತ್ತು ಇಂತಹ ಒಂದು ಆದೇಶ ನೀಡಿರುವ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ರೈತ ಸಂಘಟನೆಗಳು ಸಹಾ ಈ ಬಗ್ಗೆ ಬಾರಿ ಆಕ್ರೋಶ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ರೈತರ ನೀರಾವರಿ ಪಂಪ್ಸೆಟ್ RR ಸಂಖ್ಯೆಗೆ ರೈತರ ಆಧಾರ್ ಕಾರ್ಡ್ ಲಿಂಕ್ ಮಾಡಲು ಬಿಡುವುದಿಲ್ಲ.
ಇದು ಜಾರಿಗೆಯಾದರೆ ಕೃಷಿ ಚಟುವಟಿಕೆಗಳಿಗಾಗಿ ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಯೋಜನೆಗೆ ಮಾರಕವಾಗಬಹುದು. ಅದಕ್ಕಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಇಂತಹ ಒಂದು ಯೋಜನೆ ಜಾರಿಗೆ ಆಗಲು ಅವಕಾಶ ಮಾಡಿಕೊಡುವುದಿಲ್ಲ. ಒಂದು ವೇಳೆ ಬಲವಂತವಾಗಿ RR ಸಂಖ್ಯೆಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಲು ಹೊರಟರೆ ಉಗ್ರ ಹೋರಾಟವನ್ನು ಮಾಡಲಾಗುವುದು ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿವೆ.
ಈ ಬಗ್ಗೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬರು ಶಾಂತಕುಮಾರ್ ಅವರು ಮಾತನಾಡಿ ಇದರ ಬಗ್ಗೆ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದು ಕೇಂದ್ರ ಸರ್ಕಾರದ ಕೆಲಸ, ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ತಪ್ಪಿಸುವ ಹುನ್ನಾರ ಇದಾಗಿದೆ. ಒಂದು ವೇಳೆ ರೈತರ ನೀರಾವರಿ ಪಂಪ್ಸೆಟ್ಗಳ RR ಸಂಖ್ಯೆಗೆ ಆಧಾರ ಸಂಖ್ಯೆ ಲಿಂಕ್ ಆದರೆ ನಂತರದಲ್ಲಿ ಈ ವಿದ್ಯುತ್ ಗೆ ದರ ನಿಗದಿಪಡಿಸುತ್ತಾರೆ. ಮೊದಲು ರೈತರು ವಿದ್ಯುತ್ ತರ ಪಾವತಿ ಮಾಡಬೇಕು ನಂತರ ಸರ್ಕಾರದಿಂದ ಸಹಾಯಧನ ನೀಡಲಾಗುವುದು ಎಂದು ಹೇಳಿ ಭರವಸೆ ನೀಡುತ್ತಾರೆ.
ಆದರೆ ಈ ಹಿಂದೆ ಅಡಿಗೆ ಅನಿಲದ ಬಳಕೆ ಉತ್ತೇಜಿತ ಸರ್ಕಾರ ಇಂಥಹದೇ ಭರವಸೆ ನೀಡಿ ಅನ್ಯಾಯ ಮಾಡಿದೆ. ಮೊದಲಿಗೆ ಗ್ರಾಹಕರು ಸಂಪೂರ್ಣ ಹಣ ತೆತ್ತು ಅಡುಗೆ ಅನಿಲ ಖರೀದಿಸಬೇಕು ನಂತರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿ ಎರಡೇ ತಿಂಗಳಿಗೆ ಇದ್ದಕ್ಕಿದ್ದ ಹಾಗೆ ಸಬ್ಸಿಡಿ ಹಣ ನಿಲ್ಲಿಸಿ ಯೋಜನೆಗೆ ಮುಕ್ತಾಯ ಹಾಡಿತು. ಈಗ ಅದರ ಬಿಸಿಯನ್ನು ಗ್ರಾಹಕರು ಅನುಭವಿಸುತ್ತಿದ್ದಾರೆ.
ಸಾಮಾನ್ಯರಿಗೆ ಧ್ವನಿ ಇಲ್ಲದಂತೆ ಮಾಡಿ ಸೌಲಭ್ಯಗಳನ್ನು ಕಸಿದುಕೊಳ್ಳುವ ನೀತಿ ಇದು, ಹಾಗಾಗಿ ಮತ್ತೊಮ್ಮೆ ಈ ರೀತಿ ಆಗಲು ಬಿಡುವುದಿಲ್ಲ ಎಂದಿದ್ದಾರೆ. ಈ ಕ್ರಮಕ್ಕೆ ಮುಂದಾದರೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹ ರಾಜ್ಯದ ರೈತರೆಲ್ಲರೂ ಅದರ ವಿರುದ್ಧ ಉಗ್ರ ಹೋರಾಟ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ಸಂದೇಶವನ್ನು ರೈತರ ವತಿಯಿಂದ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ ಇದೇ ರೀತಿ ಅಭಿಪ್ರಾಯವನ್ನು ಹೊಂದಿದ್ದು, ವಿದ್ಯುತ್ ಕ್ಷೇತ್ರವನ್ನು ಕೂಡ ಖಾಸಗಿ ಮಾಡುವ ಚಿಂತನೆಯಲ್ಲಿ ಕೇಂದ್ರ ಸರ್ಕಾರ ಇದೆ. ರೈತರ ಮೇಲೆ ಸವಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಯಾಕೆ ಇಷ್ಟು ಆತುರ. ಇದೇ ಆಸಕ್ತಿಯನ್ನು ಗರಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರುವಲ್ಲಿ ತೋರಿಸಲಿ. ಆದರ ಬದಲು RR ಸಂಖ್ಯೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಕೆಲಸಕ್ಕೆ ಕೈ ಹಾಕಿದರೆ ಹೋರಾಟ ಮಾಡಿ ಬುದ್ಧಿ ಕಲಿಸುತ್ತೇವೆ ಎಂದಿದ್ದಾರೆ.