ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದು ನಮ್ಮ ಬಳಿ ಇದ್ರೆ, ಒಂದು ರೀತಿಯ ಹೂಡಿಕೆ ಇದ್ದಂತೆಯೇ. ನಾವು ಭವಿಷ್ಯಕ್ಕಾಗಿ ಸ್ವಲ್ಪ ಹಣ ಕೂಡಿಡಬೇಕು ಅಂದ್ರೆ ಯಾವುದಾದರೂ ಒಳ್ಳೆ ಸ್ಕೀಮ್ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇನ್ನು ಹಣ ಗಳಿಸುವುದಕ್ಕೆ ಇನ್ನೂ ಒಂದು ಸುವರ್ಣ ಅವಕಾಶ ಇದೆ. ದೇಶದ ಕೆಲವು ಬ್ಯಾಂಕ್ಗಳಲ್ಲಿ ಚಿನ್ನದ ಠೇವಣಿ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಾರೆ.
ಎಫ್ ಡಿ ಮೇಲಿನ ಬಡ್ಡಿ ದರ ಜಾಸ್ತಿ ಆಗಿರುವಂತೆ ಚಿನ್ನದ ಠೇವಣಿ ಮೇಲೆಯೂ ಕೂಡ ಬಡ್ಡಿದರವನ್ನು ಜಾಸ್ತಿ ಮಾಡಲಾಗಿದೆ. ಚಿನ್ನವನ್ನು ಮರೆಯಲಿಟ್ಟುಕೊಂಡರೆ ಬಡ್ಡಿ ಸಿಗುವುದಿಲ್ಲ. ಜೊತೆಗೆ ಚಿನ್ನ ಮನೆಯಲ್ಲಿದ್ದರೆ ಕಳ್ಳಕಾಕರ ಭಯವೂ ಇರುತ್ತೆ. ಅದರ ಬದಲು ನಿಮ್ಮ ಬಳಿ ಇರುವ ಚಿನ್ನವನ್ನು ಬ್ಯಾಂಕ್ನಲ್ಲಿ ಇಟ್ಟು ಒಂದಿಷ್ಟು ಹಣ ಗಳಿಸಬಹುದು ನೋಡಿ.
ಚಿನ್ನವನ್ನು ಮನೆಯಲ್ಲಿಟ್ಟುಕೊಳ್ಳುವುದಕ್ಕಿಂತ ಕೆಲವರು ಬ್ಯಾಂಕ್ ಲಾಕರ್ನಲ್ಲಿ ಚಿನ್ನವನ್ನು ಇಡುತ್ತಾರೆ. ಅಲ್ಲಿ ಚಿನ್ನ ಸುರಕ್ಷಿತವಾಗಿರುತ್ತದೆ. ಆದರೆ, ಯಾವುದೇ ಹಣ ಉಳಿತಾಯವಾಗುವುದಿಲ್ಲ. ಜೊತೆಗೆ ಲಾಕರ್ನಲ್ಲಿ ಇಟ್ಟರೆ ನಿರ್ವಹಣಾ ವೆಚ್ಚವನ್ನು ಕೂಡ ನಾವೇ ಬರಿಸಬೇಕು. ಅದರ ಬದಲು ನೀವು ಬ್ಯಾಂಕ್ನಲ್ಲಿ ಚಿನ್ನವನ್ನು ಠೇವಣಿ ಇಡಬಹುದು. ಇದರಿಂದ ಹೆಚ್ಚಿನ ಬಡ್ಡಿಯು ಸಿಗುತ್ತದೆ. ಜೊತೆಗೆ ನಿಮ್ಮ ಚಿನ್ನ ಕೂಡ ಸುರಕ್ಷಿತವಾಗಿರುತ್ತದೆ.
ಎಸ್ಬಿಐನಲ್ಲಿ ಚಿನ್ನದ ಠೇವಣಿ ಯೋಜನೆ ಆರಂಭ
ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಎಸ್ಬಿಐ ಚಿನ್ನದ ಠೇವಣಿ ಯೋಜನೆಯನ್ನು ಆರಂಭಿಸಿದ್ದು, ಹೆಚ್ಚಿನ ಹಣ ಗಳಿಸಲು ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಬಂಗಾರದ ಠೇವಣಿಗೆ ಉತ್ತಮ ಬಡ್ಡಿ ದೊರೆಯುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಠೇವಣಿ
ಚಿನ್ನದ ಠೇವಣಿ ಯೋಜನೆ ಚಿನ್ನದ ಸ್ಥಿರ ಠೇವಣಿ ಯೋಜನೆಯಂತೆ ಇರುತ್ತದೆ. ಈ ಯೋಜನೆ ಅಡಿಯಲ್ಲಿ ಗ್ರಾಹಕರು ಮನೆಯಲ್ಲಿ ಇರುವ ಚಿನ್ನವನ್ನು ಭದ್ರತೆ ದೃಷ್ಟಿಯಿಂದ ಬ್ಯಾಂಕ್ನಲ್ಲಿ ಇಡಬಹುದು. ಇದರಿಂದ ಬಡ್ಡಿ ಹಾಗೂ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಎಸ್ ಬಿ ಐ ಆರಂಭಿಸಿರುವ ಚಿನ್ನದ ಠೇವಣಿಯಲ್ಲಿ ಮೂರು ಭಾಗಗಳಿವೆ. ಅಲ್ಪಾವಧಿ ಠೇವಣಿ, ಮಧ್ಯಮಾವಧಿಯ ಸರ್ಕಾರಿ ಠೇವಣಿ ಹಾಗೂ ದೀರ್ಘಾವಧಿಯ ಠೇವಣಿ.
ಅಲ್ಪಾವಧಿ ಠೇವಣಿ ಎಂದರೆ, ಒಂದರಿಂದ ಮೂರು ವರ್ಷ ಮಧ್ಯಮಾವಧಿ ಠೇವಣಿ ಅಂದರೆ ಐದರಿಂದ ಏಳು ವರ್ಷ ಹಾಗೂ ದೀರ್ಘಾವಧಿ ಠೇವಣಿ ಎಂದರೆ 12 ರಿಂದ 15 ವರ್ಷಗಳವರೆಗೆ ಬ್ಯಾಂಕ್ನಲ್ಲಿ ಚಿನ್ನವನ್ನು ಠೇವಣಿ ಇಡಬಹುದು
ಬ್ಯಾಂಕ್ನಲ್ಲಿ ಚಿನ್ನ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
ನೀವು ಯಾವ ಅವಧಿಗೆ ಚಿನ್ನವನ್ನು ಠೇವಣಿ ಇಡುತ್ತೀರಿ ಎಂಬುದರ ಆಧಾರದ ಮೇಲೆ ಬ್ಯಾಂಕ್ನಲ್ಲಿ ಬಡ್ಡಿ ನಿರ್ಧರಿತವಾಗಿರುತ್ತದೆ. ಉದಾಹರಣೆಗೆ ಅಲ್ಪಾವಧಿಗೆ ಚಿನ್ನವನ್ನು ಇರಿಸಿದರೆ, 0.55% ನಿಂದ 0.60% ವರೆಗೆ ಬಡ್ಡಿ ಸಿಗುತ್ತದೆ. ಒಂದು ವರ್ಷದವರೆಗೆ ಚಿನ್ನವನ್ನು ಠೇವಣಿ ಇಟ್ಟರೆ, 0.50% ನಷ್ಟು ಬಡ್ಡಿ ಸಿಗುತ್ತದೆ. ಅದೇ ರೀತಿ ಒಂದು ವರ್ಷಕ್ಕಿಂತ ಹೆಚ್ಚು ಹಾಗೂ ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಚಿನ್ನ ಇಟ್ಟರೆ, 0.55% ಬಡ್ಡಿ ಹಾಗೂ ಎರಡು ವರ್ಷಗಳಿಗಿಂತ ಹೆಚ್ಚು ಮತ್ತು ಎರಡು ವರ್ಷಗಳವರೆಗೆ ಚಿನ್ನವನ್ನ ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ, ವಾರ್ಷಿಕವಾಗಿ 0.60% ಬಡ್ಡಿ ಪಡೆಯಬಹುದು.
ಇನ್ನು ಅಲ್ಪಾವಧಿಯ ಬದಲು ಮಧ್ಯಮಾವಧಿಗೆ ಠೇವಣಿ ಇಟ್ಟರೆ ಇನ್ನು ಹೆಚ್ಚಿನ ಬಡ್ಡಿದರ ಪಡೆದುಕೊಳ್ಳಬಹುದು. 2.25% ವರೆಗೆ ಮಧ್ಯಮಾವಧಿಯ ಚಿನ್ನದ ಠೇವಣಿಗೆ ಬಡ್ಡಿ ದೊರೆಯುತ್ತದೆ. ಇನ್ನು ದೀರ್ಘಾವಧಿಯ ಠೇವಣಿ ಇಡುವುದು ಇನ್ನು ಹೆಚ್ಚಿನ ಲಾಭವನ್ನು ತರುತ್ತದೆ. ನೀವು ಮನೆಯಲ್ಲಿ ಚಿನ್ನವನ್ನು ಬಳಸದೆ ಹಾಗೆ ಇಟ್ಟುಕೊಳ್ಳುವ ಬದಲು ದೀರ್ಘಾವಧಿಯ ಠೇವಣಿಯಲ್ಲಿ ಹೂಡಿಕೆ ಮಾಡಬಹುದು. ಹೀಗೆ ಮಾಡಿದರೆ 2.50%ನಷ್ಟು ಬಡ್ಡಿ ದೊರೆಯುತ್ತದೆ.
ಬ್ಯಾಂಕ್ ನಲ್ಲಿ ಚಿನ್ನ ಇಡಲು ಬೇಕಾಗುವ ದಾಖಲೆಗಳು
ನೀವು ಕೆಲವು ದಾಖಲೆಗಳನ್ನು ನೀಡಿದರೆ ಸಾಕು ನಿಮ್ಮ ಬಳಿ ಇರುವ ಚಿನ್ನವನ್ನು ಬ್ಯಾಂಕ್ನಲ್ಲಿ ಭದ್ರವಾಗಿ ಠೇವಣಿ ಮಾಡಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳು, ಗುರುತಿನ ಚೀಟಿ, ವಿಳಾಸದ ಪುರಾವೆ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್, ಪಾಸ್ಪೋರ್ಟ್ ಗಾತ್ರದ ಫೋಟೋ. ಇಷ್ಟು ದಾಖಲೆಗಳ ಜೊತೆಗೆ ನಿಮ್ಮ ಚಿನ್ನವನ್ನು ಬ್ಯಾಂಕ್ಗೆ ತೆಗೆದುಕೊಂಡು ಹೋಗಿ ಅಲ್ಲಿ ಠೇವಣಿ ಇಡಬಹುದು.
ಇನ್ನು ನೀವು ಬ್ಯಾಂಕ್ನಲ್ಲಿ ಚಿನ್ನವನ್ನು ಠೇವಣಿ ಇಡಲು ನಿಮ್ಮ ಬಳಿ ಕನಿಷ್ಠ 30 ಗ್ರಾಂ ಚಿನ್ನ ಇರಬೇಕು. ಆದರೆ, ಗರಿಷ್ಠ ಹೂಡಿಕೆಯ ಮಿತಿ ಇರುವುದಿಲ್ಲ. 995 ಶುದ್ಧತೆಯ ಚಿನ್ನವನ್ನು ಮಾತ್ರ ಬ್ಯಾಂಕ್ನಲ್ಲಿ ಇಟ್ಟುಕೊಳ್ಳಲಾಗುತ್ತದೆ.