ಗ್ರಾಮೀಣ ಭಾಗದಲ್ಲಿರುವ ಜನರು ತಮ್ಮ ಸೈಟ್ ಮನೆ ಕಟ್ಟಡ ಮುಂತಾದ ಆಸ್ತಿಗಳಿಗೆ ಕಡ್ಡಾಯವಾಗಿ ಇ-ಸ್ವತ್ತು ಮಾಡಿಸಲೇಬೇಕು. ಇಲ್ಲವಾದಲ್ಲಿ ಅದನ್ನು ಮಾರಾಟ ಮಾಡುವಾಗ ಕಷ್ಟವಾಗುತ್ತದೆ ಮತ್ತು ಇ-ಸ್ವತ್ತು ಆಗಿಲ್ಲ ಎಂದರೆ ಅದನ್ನು ದಾನ ಪತ್ರ, ಸೇಲ್ ಡೀಡ್, ಹಕ್ಕು ಬಿಡುಗಡೆ ಪತ್ರ ಮಾಡಿಸುವಾಗ ಮತ್ತು ಆಸ್ತಿಗಳ ಮೇಲೆ ಬ್ಯಾಂಕ್ ಲೋನ್ ತೆಗೆದುಕೊಳ್ಳುವಾಗ ಸಮಸ್ಯೆಯಾಗುತ್ತದೆ.
ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ಇ-ಸ್ವತ್ತು ಮಾಡಿಸಿಕೊಳ್ಳಬೇಕು ಆದರೆ ಇ-ಸ್ವತ್ತು ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಾರೆ ಜೊತೆಗೆ ಮಧ್ಯವರ್ತಿಗಳು ಹಣದ ಬೇಡಿಕೆ ಇಡುತ್ತಾರೆ ಎನ್ನುವುದು ಎಲ್ಲಾ ಕಡೆ ಕೇಳಿ ಬರುತ್ತಿರುವ ಸಾಮಾನ್ಯ ದೂರಾಗಿದೆ. ಇದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದಕ್ಕೊಂದು ಪರಿಹಾರ ಕಂಡುಹಿಡಿಯಲಾಗಿದೆ.
ಅದೇನೆಂದರೆ, ಈಗ ಆನ್ಲೈನ್ ನಲ್ಲಿ ಸರ್ಕಾರ ಪರಿಚಯಿಸಿರುವ ಇ-ಸ್ವತ್ತು ತಂತ್ರಾಂಶದ ಮೂಲಕವಾಗಿ ಯಾವ ಮಧ್ಯವರ್ತಿಯ ಕಾಟವು ಇಲ್ಲದೆ ಸೂಕ್ತ ದಾಖಲೆಗಳನ್ನು ಸರಿಯಾಗಿ ಕೊಟ್ಟು ಮತ್ತು ಅದಕ್ಕಿರುವ ಅರ್ಜಿ ಶುಲ್ಕಗಳನ್ನು ಪಾವತಿಸುವ ಮೂಲಕ ಕೇವಲ 45 ದಿನಗಳಲ್ಲಿ ನಿಮ್ಮ ಆಸ್ತಿಗೆ ಇ-ಸ್ವತ್ತು ಮಾಡಿಸಿಕೊಳ್ಳಬಹುದು ಮತ್ತು ನಿಮ್ಮ ಆಸ್ತಿ ಇ-ಸ್ವತ್ತು ಆಗಿದೆಯೋ ಇಲ್ಲವೋ ಎನ್ನುವುದನ್ನು ನಂತರ ನೀವು ಮೊಬೈಲ್ ನಲ್ಲಿಯೇ ಚೆಕ್ ಕೂಡ ಮಾಡಿಕೊಳ್ಳಬಹುದು. ಇದು ಹೇಗೆ ಮತ್ತು ಏನೆಲ್ಲ ದಾಖಲೆಗಳನ್ನು ಕೊಡಬೇಕು ಎನ್ನುವ ವಿವರವನ್ನು ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.
* ಪ್ರಸ್ತುತವಾಗಿ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 2ಎ, ನಮೂನೆ 2ಬಿ ಪಡೆಯಲು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು
* ಗ್ರಾ.ಪಂ ಅಧಿಕಾರಿಗಳು ಸದರಿ ಆಸ್ತಿಯು ಗ್ರಾಮ ಠಾಣಾದ ಒಳಗೆ ಬರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಲು ಮೋಜಣಿ ತಂತ್ರಾಂಶದ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸುತ್ತಾರೆ.
* ಬಳಿಕ ಅರ್ಜಿದಾರರು ನಾಡಕಚೇರಿ ಕೇಂದ್ರಗಳಿಗೆ ಭೇಟಿ ನೀಡಿ 800 ರೂ. ಅರ್ಜಿ ಶುಲ್ಕ ಪಾವತಿಸಬೇಕು
* ಭೂಮಾಪಕರು ಅಳತೆ ಮಾಡಿ ಸದರಿ ಆಸ್ತಿಯು ಗ್ರಾಮಠಾಣಾ ಒಳಗೆ ಅಥವಾ ಹೊರಗೆ ಬರುವ ಬಗ್ಗೆ ದಾಖಲೆಗಳೊಂದಿಗೆ ಮಾಹಿತಿಯನ್ನು ಮೋಜಣಿ ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿಗೆ ಸಲ್ಲಿಸುತ್ತಾರೆ.
* ಇ-ಖಾತೆ ನೀಡಲು ನೆರವಾಗುವಂತೆ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಮೇಕರ್ಗಳನ್ನಾಗಿ ಹಾಗೂ PDO ಗಳನ್ನು ಚೆಕರ್ಗಳಾಗಿ ನಿಯೋಜಿಸಲಾಗಿರುತ್ತದೆ.
* ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ- ತಂತ್ರಾಂಶದ ಮೂಲಕ ಅರ್ಜಿದಾರರ ಪೂರ್ಣ ವಿವರಗಳನ್ನು ದಾಖಲಿಸಿಕೊಂಡು ಅರ್ಜಿದಾರರಿಂದ ಪಡೆದ ಆಸ್ತಿಯ ವಿಸ್ತೀರ್ಣ ಮತ್ತು ಚಕ್ಕುಬಂದಿಯ ಆಧಾರದ ಮೇಲೆ ಗ್ರಾ.ಪಂ. ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಭೌತಿಕವಾಗಿ ಸ್ಥಳಕ್ಕೆ ಭೇಟಿ ನೀಡುತ್ತಾರೆ, ದಿಶಾಂಕ್ ಆ್ಯಪ್ ಮೂಲಕ ಆ ಆಸ್ತಿಯ ಪ್ರತಿಯೊಂದು ಮೂಲೆಯ GPS ಮತ್ತು ಸದರಿ ಆಸ್ತಿ ಛಾಯಾಚಿತ್ರ ಸೆರೆಹಿಡಿದು ಅಪ್ಲೋಡ್ ಮಾಡುತ್ತಾರೆ
* PDO ಗಳು ಸ್ಥಳಕ್ಕೆ ಭೇಟಿ ನೀಡದೆ ದಿಶಾಂಕ್ ಆ್ಯಪ್ ಲಾಗಿನ್ ಮೂಲಕ GPS ಮತ್ತು ಫೋಟೋಗಳನ್ನು ಪರಿಶೀಲಿಸಿ ದೃಢೀಕರಿಸುತ್ತಾರೆ. ಅನುಮಾನಸ್ಪದವಾಗಿ ಕಂಡು ಬಂದ ಕೇಸ್ ಗಳಲ್ಲಿ ಮಾತ್ರ ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಾರೆ.
* ನಂತರ ನೀವು ನೇರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಆಸ್ತಿ ವಿವರಗಳನ್ನು ನಮೂದಿಸಿ ಅದು ಇ-ಸ್ವತ್ತು ಆಗಿದೆಯಾ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದು.
ಇ-ಸ್ವತ್ತು ಮಾಡಿಸಲು ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಆಸ್ತಿಗೆ ಸಂಬಂಧ ಪಟ್ಟ ದಾಖಲೆಗಳು
* ಆಸ್ತಿಗೆ ಕಂದಾಯ ಪಾವತಿ ಮಾಡಿರುವ ರಶೀದಿ
* ಕರೆಂಟ್ ಬಿಲ್, ನೀರಿನ ಬಿಲ್ ಇತ್ಯಾದಿ ಪ್ರಮುಖ ದಾಖಲೆಗಳು.