ಗೃಹ ಸಾಲಗಳು ಆಸ್ತಿಯನ್ನು ಮೇಲಾಧಾರವಾಗಿ ಒತ್ತೆ ಇಟ್ಟು ರಿಯಲ್ ಎಸ್ಟೇಟ್ ಖರೀದಿಸಲು ಪಡೆದ ಸುರಕ್ಷಿತ ಸಾಲಗಳಾಗಿವೆ. ಗೃಹ ಸಾಲಗಳೊಂದಿಗೆ, ನೀವು ಕೈಗೆಟುಕುವ ಬಡ್ಡಿ ದರದಲ್ಲಿ ಮತ್ತು ದೀರ್ಘಾವಧಿಯವರೆಗೆ ಹೆಚ್ಚಿನ ಮೌಲ್ಯದ ಹಣವನ್ನು ಪಡೆದುಕೊಳ್ಳಬಹುದು. ಸಾಲವನ್ನು ಮಾಸಿಕ ಪಾವತಿಗಳ ಮೂಲಕ ಮರುಪಾವತಿ ಮಾಡಲಾಗುತ್ತದೆ.
ಸಾಲಗಾರನು ಮರುಪಾವತಿಯ ನಂತರ ಆಸ್ತಿಯ ಶೀರ್ಷಿಕೆಯನ್ನು ಮರಳಿ ಪಡೆಯುತ್ತಾನೆ. ಗೃಹ ಸಾಲಗಳು ಹಣಕಾಸು ಒದಗಿಸುತ್ತವೆ. ಆದ್ದರಿಂ,ದ ನೀವು ನಿಮ್ಮ ಕನಸಿನ ಮನೆಯನ್ನು ಖರೀದಿಸಬಹುದು. ಸಾಮಾನ್ಯವಾಗಿ, ಸಾಲದಾತರು ಮನೆಯ ವೆಚ್ಚದ 75-90% ಅನ್ನು ಒಳಗೊಳ್ಳುತ್ತಾರೆ ಮತ್ತು ನೀವು ಉಳಿದ ಮೊತ್ತಕ್ಕೆ ಸಮಾನವಾದ ಆರಂಭಿಕ ಪಾವತಿಯನ್ನು (ಡೌನ್ ಪೇಮೆಂಟ್) ಮಾಡಬೇಕು.
ಮನೆ ಮಾಲೀಕತ್ವಕ್ಕಾಗಿ ಸಾಲಗಳು ಕಡಿಮೆ-ಬಡ್ಡಿ ದರಗಳು ಮತ್ತು ದೀರ್ಘ ಮರುಪಾವತಿಯ ನಿಯಮಗಳೊಂದಿಗೆ ಸಾಕಷ್ಟು ಹಣವನ್ನು ಒದಗಿಸುತ್ತವೆ. ಗೃಹ ಸಾಲ ಪಡೆಯುವುದು ಸುಲಭವಲ್ಲ. ಅದಕ್ಕೆ ಹತ್ತು ಹಲವು ನೀತಿ-ನಿಯಮಗಳಿರುತ್ತವೆ. ಬ್ಯಾಂಕುಗಳು ಸಾಲ ಮೊತ್ತ ಮತ್ತು ಬಡ್ಡಿ ದರ ನಿಗದಿಗೂ ಹಲವಾರು ಮಾನದಂಡಗಳನ್ನು ಹಾಕುತ್ತವೆ.
ವೇತನದಾರ ಅಥವಾ ಸ್ವಯಂ ಉದ್ಯೋಗಿಯಾಗಿರುವ ವ್ಯಕ್ತಿಗೆ, ಕಂಪನಿಯ ಮೇಲೆ, ಪಾಲುದಾರಿಕೆ ಸಂಸ್ಥೆಯಡಿ ಮತ್ತು ಲಿಮಿಟೆಡ್ ಕಂಪನಿಗಳಿಗೆ ಕೂಡ ಬ್ಯಾಂಕುಗಳು ಸಾಲ ನೀಡುತ್ತವೆ. ಸಾಲದ ಮೊತ್ತವು ಕೆಲವೊಂದು ಅಂಶಗಳ ಮೇಲೆ ಅವಲಂಬಿತವಾಗಿವೆ.
ಸೈಟು ಅಥವಾ ಮನೆ ನಿರ್ಮಾಣ ಸಾಲ: ಅರ್ಹತಾ ಮಾನದಂಡ
ಸೈಟು ತೆಗೆದುಕೊಳ್ಳಲು ಅಥವಾ ಮನೆ ನಿರ್ಮಾಣಕ್ಕಾಗಿ ಸಾಲ ಪಡೆಯಲು, ಅರ್ಜಿದಾರನು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
* ವಯಸ್ಸು: 18 ವರ್ಷದಿಂದ 65 ವರ್ಷಗಳು.
* ವಸತಿ ಸ್ಥಿತಿ: ಭಾರತೀಯ ಅಥವಾ ಅನಿವಾಸಿ ಭಾರತೀಯ (ಎನ್ಆರ್ಐ) ಆಗಿರಬೇಕು.
* ಉದ್ಯೋಗ: ಸ್ವಯಂ ಉದ್ಯೋಗಿ ಮತ್ತು ಸಂಬಳ ಪಡೆಯುವ ವ್ಯಕ್ತಿಗಳು.
* ಕ್ರೆಡಿಟ್ ಸ್ಕೋರ್: 750 ಕ್ಕಿಂತ ಹೆಚ್ಚು.
* ಆದಾಯ: ತಿಂಗಳಿಗೆ ಕನಿಷ್ಠ 25 ಸಾವಿರ ರೂ.
ಅವಶ್ಯಕ ದಾಖಲೆಗಳು
ಗೃಹ ಸಾಲ ಪಡೆಯಲು ಗೃಹ ಸಾಲದ ದಾಖಲೆಗಳು ಕಡ್ಡಾಯ. ವಯಸ್ಸು, ವಿಳಾಸ, ಆದಾಯ, ಉದ್ಯೋಗ, ಆದಾಯ ತೆರಿಗೆ, ಇತ್ಯಾದಿಗಳಂತಹ ಅರ್ಜಿದಾರರ ಕುರಿತು ಪ್ರಮುಖ ಮಾಹಿತಿಯನ್ನು ಇವು ಒದಗಿಸುತ್ತವೆ. ಸಂಬಳದ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಆದಾಯಕ್ಕಾಗಿ ಹೋಮ್ ಲೋನ್ ದಾಖಲೆಗಳು ಸ್ವಲ್ಪ ಭಿನ್ನವಾಗಿರುತ್ತವೆ ಎಂಬುದನ್ನು ನೆನಪಿನಲ್ಲಿಡಿ.
ಒಮ್ಮೆ ಪ್ರಾಪರ್ಟಿ ಖರೀದಿ ನಿರ್ಧಾರ ಅಂತಿಗೊಳಿಸಿದ ಬಳಿಕ ಬ್ಯಾಂಕ್ ಅಥವಾ ಗೃಹ ಹಣಕಾಸು ಕಂಪನಿಗಳಿಗೆ ನೀವು ಅರ್ಜಿ ಹಾಕಬಹುದು. ಆಗ ಅಪ್ಲಿಕೇಶನ್ ಫಾರ್ಮ್ ಪ್ರೊಸೆಸಿಂಗ್ ಶುಲ್ಕ (ಸಾಮಾನ್ಯವಾಗಿ ಸಾಲ ಮೊತ್ತದ ನಿರ್ದಿಷ್ಠ ಶೇಕಡಾವಾರು ಪ್ರಮಾಣ), ಅರ್ಜಿದಾರ ಮತ್ತು ಸಹ ಅರ್ಜಿದಾರನ ಭಾವಚಿತ್ರಗಳು, ಇಬ್ಬರ ಆದಾಯ ದೃಢೀಕರಣ ಪತ್ರ, ಪಾನ್ ಮತ್ತು ಐಡಿ ಪ್ರೂಫ್, ವೇತನದಾರರಾಗಿದ್ದರೆ ಕೆಲವು ತಿಂಗಳಿಂದ ಇಲ್ಲಿನ ತನಕದ ಪೇ ಸ್ಲಿಪ್, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಇತ್ತೀಚಿನ ಫಾರ್ಮ್ 16 ನೀಡಬೇಕಾಗುತ್ತದೆ.
ಸ್ವಯಂ ಉದ್ಯೋಗಿಯಾಗಿದ್ದರೆ, ಉದ್ಯಮದ ಸ್ವರೂಪ, ಆರಂಭಿಸಿದ ವರ್ಷ, ಸದ್ಯದ ಬ್ಯಾಂಕ್ ವ್ಯವಹಾರ, ಒಟ್ಟು ಆದಾಯದ ಪ್ರಮಾಣ ಪತ್ರ, ತೆರಿಗೆ ಸಲ್ಲಿಕೆ ವಿವರ, ಕೆಲವು ವರ್ಷಗಳಿಂದೀಚೆ ಸಲ್ಲಿಸಿದ ತೆರಿಗೆ ರಿಟರ್ನ್ಸ್, ಕಂಪನಿಯ ಬ್ಯಾಲೆನ್ಸ್ಶೀಟ್, ಪ್ರಾಫಿಟ್ ಆಂಡ್ ಲಾಸ್ ಅಕೌಂಟ್ ವಿವರ ನೀಡಬೇಕು. ನೆಟ್ ವರ್ತ್ ಸ್ಟೇಟ್ಮೆಂಟ್ಗಾಗಿ ಅರ್ಜಿದಾರ ಮತ್ತು ಸಹ ಅರ್ಜಿದಾರರಿಬ್ಬರೂ ಎಲ್ಐಸಿ ಪಾಲಿಸಿ, ಕುಟುಂಬದ ವಿವರ, ಹೆಸರು, ವಯಸ್ಸು, ಸಂಬಂಧ, ಉದ್ಯೋಗ, ಆದಾಯದ ವಿವರ, ಗ್ಯಾರೆಂಟರ್ನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು.