ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಕೆಲವೊಮ್ಮೆ ಹೆಚ್ಚಿನ ಮೊತ್ತದ ಸಾಲ ಬೇಕಾದಾಗ ಆ ಸಾಲಕ್ಕೆ ನಾವು ನಮ್ಮ ಬಳಿ ಇರುವ ಯಾವುದಾದರು ಆಸ್ತಿ, ಜಾಗ ಅಥವಾ ಮನೆಯನ್ನು ಶ್ಯೂರಿಟಿಯಾಗಿ ಕೊಡಬೇಕಾಗುತ್ತದೆ. ಜನ ಹೆಚ್ಚಿನ ಮೊತ್ತದ ಹಣ ಬೇಕಾದಾಗ ಈ ರೀತಿ ತಮ್ಮ ಆಸ್ತಿಯನ್ನು ಅಡಮಾನಕ್ಕೆ ಇಟ್ಟು ಅದರ ಮೇಲೆ ಬ್ಯಾಂಕಿಂದ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆಯುತ್ತಾರೆ.
ಯಾವುದಾದರೂ ಒಂದು ಪರಿಸ್ಥಿತಿಯಲ್ಲಿ ಸಾಲ ಹಿಂತಿರುಗಿಸಲು ಅಥವಾ ಅದರ ವಂತಿಕೆಗಳನ್ನು ಸರಿಯಾಗಿ ಪಾಲಿಸಲು ಸಾಧ್ಯವಾಗದೆ ಹೋದರೆ ಸಾಲದ ಹೊರೆ ಹೆಚ್ಚಾಗಿ, ಸಾಲಗಾರನು ಹಣ ಕಟ್ಟುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಬಂದಾಗ ಆಸ್ತಿ ಹರಾಜು ಮಾಡಿ ಸಾಲ ವಸೂಲಿ ಮಾಡಲು ಬ್ಯಾಂಕ್ ಗಳು ಮುಂದಾಗುತ್ತವೆ. ಆದರೆ ಯಾವ ವ್ಯಕ್ತಿಗೂ ಕೂಡ ತಾನು ಸಂಪಾದನೆ ಮಾಡಿದ ಅಥವಾ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ.
ಈ ಸಮಯದಲ್ಲಿ ಸಾಲ ಪಡೆದವನಿಗೂ ಕೂಡ ತನ್ನದೇ ಆದ ಹಕ್ಕುಗಳು ಇರುತ್ತವೆ. ಸಾಲ ಕೊಟ್ಟವರಿಗೂ ಹಣ ವಸೂಲಿ ಮಾಡಬೇಕು ಎನ್ನುವುದಕ್ಕೆ ಕೆಲವು ನಿಯಮಗಳ ಚೌಕಟ್ಟು ಇರುತ್ತದೆ. ಅವುಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಯಾವುದಾದರೂ ಪರಿಸ್ಥಿತಿಯಲ್ಲಿ ಸಾಲ ಪಡೆದ ಮೇಲೆ ವ್ಯಕ್ತಿಯು ಅದರ ಬಡ್ಡಿ ಅಥವಾ EMI ಅಥವಾ ಸಾಲ ಮರುಪಾವತಿ ಮಾಡಲು ವಿಫಲನಾಗಿ ಡೀಫಾಲ್ಟರ್ ಆಗಿದ್ದರೆ, ಆತನು ಮಾಡಿದ ಸಾಲಕ್ಕೆ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಅಡಮಾನವಾಗಿ ಇಟ್ಟಿದ್ದರೆ ಬ್ಯಾಂಕ್ ಗಳು ಅವುಗಳನ್ನು ಹರಾಜು ಹಾಕಿ ತಮ್ಮ ಹಣ ಪಡೆಯಬಹುದು ಆದರೆ ಈ ಸಮಯದಲ್ಲಿ ವ್ಯಕ್ತಿಗೆ 60 ದಿನಗಳ ಮುಂಚೆ ನೋಟಿಸ್ ನೀಡಿರಬೇಕು.
● ಆ ವ್ಯಕ್ತಿಯು ವಾಸವಿರುವ ವಿಳಾಸಕ್ಕೆ ಆತನಿಗೆ ತಲುಪುವಂತೆಯೇ ನೋಟಿಸ್ ನೀಡಬೇಕು ಹಾಗೂ 30 ದಿನಗಳ ಕಾಲ ಸಾರ್ವಜನಿಕ ಸೂಚನೆ ನೀಡಬೇಕು.
● ವ್ಯಕ್ತಿಯ ಆಸ್ತಿಯನ್ನು ಅದನ್ನು ನ್ಯಾಯತವಾದ ಬೆಲೆಗೆ ಮಾರಾಟ ಮಾಡಬೇಕು ಮತ್ತು ಆ ಮಾಹಿತಿಯನ್ನು ಸಾಲಗಾರನಿಗೆ ನೀಡಬೇಕು. ಆ ಆಸ್ತಿಯ ನ್ಯಾಯಯುತವಾದ ಬೆಲೆಯನ್ನು ಬ್ಯಾಂಕಿನ ಮೌಲ್ಯಮಾಪಕರಿಂದ ನಿಗದಿಪಡಿಸಲಾಗುತ್ತದೆ.
● ಹರಾಜು ಮಾಡಲು ನಿಗದಿಪಡಿಸಿದ ದಿನಾಂಕ, ಸಮಯ, ಸ್ಥಳ ಎಲ್ಲವನ್ನು ಕೂಡ ಆ ಆಸ್ತಿಯ ಮಾಲಿಕರಿಗೆ ಅಂದರೆ ಸಾಲ ಮಾಡಿದ ಸಾಲಗಾರನಿಗೆ ತಿಳಿಸಬೇಕು.
● ಆಸ್ತಿಯು ಒಂದು ವೇಳೆ ಹೆಚ್ಚಿನ ಬೆಲೆಗೆ ಮಾರಾಟವಾದರೆ ಉಳಿದ ಮೊತ್ತವು ಸಾಲಗಾರನಿಗೆ ಸೇರುತ್ತದೆ.
● ಆಸ್ತಿ ಹರಾಜು ಪ್ರಕ್ರಿಯೆ ಮುನ್ನ ಅಥವಾ ಆ ಸಮಯದಲ್ಲಿ ಸಾಲಗಾರನೇ ಬೇರೊಬ್ಬ ಖರೀದಿದಾರನನ್ನು ಹುಡುಕಿದರೆ ಆತನನ್ನು ಬ್ಯಾಂಕ್ ಗೆ ಪರಿಚಯಿಸಿ ಆಸ್ತಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬಹುದು.
● ಕೆಲವೊಮ್ಮೆ ಬ್ಯಾಂಕುಗಳು ಸಾಲ ವಸೂಲಿಗೆ ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಅವರು ಕೂಡ ಸಾಲ ಪಡೆದಿರುವ ವ್ಯಕ್ತಿಗೆ ಮಾನಸಿಕವಾಗಿ ನೋವುಂಟು ಮಾಡದೆ, ಅನುಚಿತವಾಗಿ ವರ್ತಿಸದೆ ಗೌರವಾನ್ವಿತವಾಗಿ ಮಾತುಕತೆ ನಡೆಸಿ ಸಾಲ ವಾಪಸ್ ಪಡೆದುಕೊಳ್ಳಲು ಪ್ರಯತ್ನಿಸಬೇಕು.
● ರಿಕವರಿ ಏಜೆಂಟ್ ಗಳು ಬೆಳಗ್ಗೆ 7:00 ಸಂಜೆ 7:00 ರ ಒಳಗೆ ಮಾತ್ರ ಕರೆ ಅಥವಾ ಸಂದೇಶದ ಮೂಲಕ ಸಾಲಗಾರನನ್ನು ಸಂಪರ್ಕಿಸಬಹುದು. ಅವ್ಯಾಚ ಶಬ್ದಗಳನ್ನು ಬಳಸಿ ಮಾತನಾಡುವಂತಿಲ್ಲ ಮತ್ತು ಅಮಾನವೀಯವಾಗಿ ವರ್ತಿಸುವಂತಿಲ್ಲ.
● ಸಾಲಗಾರನ ಮನೆ ಬಳಿ ಹೋಗಿ ಅಥವಾ ಅವರ ಕುಟುಂಬದವರ ಕಚೇರಿಗಳಿಗೆ ಹೋಗಿ ತೊಂದರೆ ಕೊಡುವಂತಿಲ್ಲ.
● ಸಾಲ ಪಡೆದ ವ್ಯಕ್ತಿಯು ಕೂಡ ಬ್ಯಾಂಕ್ ಗ್ರಾಹಕನೇ ಆಗಿರುವುದರಿಂದ ಯಾವುದೇ ಕಾರಣಕ್ಕೂ ಸಾಲಗಾರನಿಗೆ ನೋವಾಗುವಂತೆ ಆತನ ಗೌರವಕ್ಕೆ ಧಕ್ಕೆ ಆಗುವ ರೀತಿ ಬ್ಯಾಂಕುಗಳು ನಡೆಸಿಕೊಳ್ಳುವಂತಿಲ್ಲ ಎನ್ನುವ ನಿಯಮ ಇದೆ.ಅದರ ಪ್ರಕಾರವಾಗಿಯೇ ಬ್ಯಾಂಕ್ ಗಳು ನಡೆದುಕೊಳ್ಳಬೇಕು.