ಹೈನುಗಾರಿಕೆ ರೈತನಿಗೆ ಕೃಷಿ ಜೊತೆಗೆ ಲಾಭ ಕೊಡುವ ಉದ್ಯಮವಾಗಿದೆ. ಕೆಲವು ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕರು ಕೃಷಿ ಅವಲಂಬಿತ ಕಸುಬಾದ ಹೈನುಗಾರಿಕೆಯನ್ನೇ ತಮ್ಮ ಜೀವನೋಪಾಯದ ಮುಖ್ಯ ಆದಾಯ ಮಾಡಿಕೊಂಡಿರುವ ಉದಾಹರಣೆಗೂ ಇದೆ.
ಹೈನುಗಾರಿಕೆಯಲ್ಲಿ ಇರುವ ಒಂದು ಸಾಮಾನ್ಯ ಸಮಸ್ಯೆ ಏನೆಂದರೆ, ನಾಟಿ ಹಸುಗಳಿಂದ ಇಳುವರಿ ಕಡಿಮೆ ಆದರೆ ಈ ಹಾಲಿನಲ್ಲಿ ಡೈರಿ ಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ಮಾಡುವಾಗ ಪ್ರಮುಖವಾಗಿ ನೋಡಲಾಗುವ ಕೊಬ್ಬು, ಕೊಬ್ಬಿನಾಂಶ ಮತ್ತು ಘನ ಪದಾರ್ಥಗಳು ಇರುತ್ತವೆ.
ಈ ಕಾರಣಕ್ಕಾಗಿ ಅಧಿಕ ಇಳುವರಿ ಕೊಡುವ HF ಮಿಶ್ರ ತಳಿಯ ರಾಸುಗಳನ್ನು ಸಾಕಿದರೆ ಇಳುವರಿಯೇನೋ ಇರುತ್ತದೆ. ಆದರೆ ಹಾಲಿನ ಗುಣಮಟ್ಟ ಪರೀಕ್ಷಿಸಿದಾಗ ಗುಣಮಟ್ಟ ಕಡಿಮೆ ಇರುವುದರಿಂದ ವಾಪಸ್ ಕಳಿಸುವ ಉದಾಹರಣೆಗಳು ಇವೆ. ಇದರಿಂದ ರೈತರಿಗೆ ಬಹಳ ನೋ’ವಾಗುತ್ತಿದೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತರು ಪರದಾಡುತ್ತಿದ್ದಾರೆ.
ಇದಕ್ಕೆ ಪಶು ವೈದ್ಯರೊಬ್ಬರ ಸಲಹೆಗಳನ್ನು ಕೊಟ್ಟಿದ್ದಾರೆ. ನೀವು ಈ ಉಪಾಯಗಳನ್ನು ಪಾಲಿಸಿ ಸರಿಯಾದ ರೀತಿಯಲ್ಲಿ ಪಶುಪಾಲನೆ ಮಾಡಿದ್ದಲ್ಲಿ ನಿಮ್ಮ ಹಾಲಿನ ಗುಣಮಟ್ಟ ಹೆಚ್ಚಿ, ಇಳುವರಿ ಹೆಚ್ಚಾಗಿ, ರಾಸುಗಳು ಆರೋಗ್ಯವಾಗಿದ್ದು ಹೆಚ್ಚಿನ ಲಾಭ ಪಡೆಯುತ್ತೀರಿ. ಅದಕ್ಕಾಗಿ ಈ ಕೆಳಗಿನ ಸಿಂಪಲ್ ಟ್ರಿಕ್ ಗಳನ್ನು ಫಾಲೋ ಮಾಡಿ.
* ಹಸುಗಳಿಗೆ ಶುದ್ದವಾದ ನೀರನ್ನು ಕುಡಿಸಬೇಕು. ಕುಡಿಯುವ ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಚೆನ್ನಾಗಿ ಕ್ಲೀನ್ ಮಾಡಿ ತೊಳೆಯಬೇಕು, ತಿಂಗಳಿಗೊಮ್ಮೆ ತೊಟ್ಟಿಗೆ ಸುಣ್ಣವನ್ನು ಹಚ್ಚಬೇಕು, ಜಂತುನಾಶಕ ಔಷಧಿಯನ್ನು ರಾಸುಗಳಿಗೆ ಕುಡಿಸಬೇಕು. ಪ್ರತಿದಿನ 100-150 ಗ್ರಾಂ ಮಿನರಲ್ ಪುಡಿಯನ್ನು ದಿನಕ್ಕೆ 2 ಬಾರಿಯಂತೆ ನೀರಿನಲ್ಲಿ ಹಾಕಿ ಕುಡಿಸಬೇಕು.
* ಒಣ ಮತ್ತು ಹಸಿ ಮೇವನ್ನು ಕತ್ತರಿಸಿ ಕೊಡಬೇಕು. ಕೆಲವೊಮ್ಮೆ ಬರಿ ಹಸಿಮೇವು, ಕೆಲವೊಮ್ಮೆ ಬರಿ ಒಣಮೇವು ಹೀಗೆ ಒಂದೇ ರೀತಿಯ ಆಹಾರ ಕೊಡುವ ಬದಲು ಪ್ರತಿ ದಿನ ಹಸಿ ಮೇವು, ಒಣ ಮೇವು ಹಾಗೂ ಚುನ್ನಿ ಮಿಶ್ರಣವನ್ನು ನೀಡಬೇಕು.
* ಅನುಕೂಲವಿದ್ದರೆ ನೆಕ್ಕು ಬಿಲ್ಲೆಗಳನ್ನು ಬಳಸಬೇಕು.
* 1 ltr ಹಾಲಿನ ಇಳುವರಿಗೆ 300 ಗ್ರಾಂ ನಂತೆ ಹಿಂಡಿ ಮಿಶ್ರಣ ನೀಡಬೇಕು. ಈ ಹಿಂಡಿ ಮಿಶ್ರಣ ಹೆಚ್ಚಾದರೂ ಕಡಿಮೆಯಾದರೂ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ.
* ಅಧಿಕ ಇಳುವರಿ ನೀಡುವ ಹಸುಗಳಿಗೆ ದಿನಕ್ಕೆ 300 ಗ್ರಾಂ. ಬೆಲ್ಲ ನೀಡಬೇಕು. ಹೆಚ್ಚಿನ ಪ್ರಮಾಣದ ಬೆಲ್ಲ ಹೊಟ್ಟೆಯುಬ್ಬರ ಉಂಟು ಮಾಡುತ್ತದೆ, ಅನಾರೋಗ್ಯವು ಉಂಟಾಗಬಹುದು ಹಾಗಾಗಿ ಈ ಪ್ರಮಾಣದ ಬಗ್ಗೆ ಎಚ್ಚರ ಇರಲಿ.
* ಅತಿಯಾದ ಡಿಗ್ರಿ ಸಮಸ್ಯೆ ಇದ್ದರೆ ಮಾರುಕಟ್ಟೆಯಲ್ಲಿ ದೊರೆಯುವ ಕ್ಯಾಲ್ಸಿಯಂ ದ್ರಾವಣಗಳನ್ನು ಪ್ರತಿದಿನ 2 ಸಲ 100 ಮಿಲಿ ಲೀಟರ್ ಗೆ ಹಾಕಿ ಕುಡಿಸಬೇಕು.
* ಹಾಲಿನಲ್ಲಿರುವ ಕೊಬ್ಬಿನಾಂಶವನ್ನು ಹೆಚ್ಚಿಸಲು ಶೇಂಗಾ ಹಿಂಡಿ ಹೊರತುಪಡಿಸಿ ಬೇರೆ ಎಲ್ಲ ಎಣ್ಣೆ ಕಾಳು ಹಿಂಡಿಗಳನ್ನು ಪ್ರತಿ ಲೀಟರ್ ಹಾಲಿನ ಇಳುವರಿಗೆ 200 ಗ್ರಾಂ.ನಂತೆ ಅಳತೆ ಇಟ್ಟುಕೊಂಡು ಹಸುಗಳಿಗೆ ಕೊಡಬೇಕು. ಹತ್ತಿ ಕಾಳು ಹಿಂಡಿ ಉತ್ತಮ ಫಲಿತಾಂಶ ನೀಡುತ್ತದೆ. ಹತ್ತಿ ಕಾಳು ಪುಡಿ ಮಾಡಿ ನೀರಿನಲ್ಲಿ ನೆನಸಿ ತೊಳೆದು ನಂತರ ಕೊಡುವುದರಿಂದ ಹಾಲಿನ ಜಿಡ್ಡಿನಾಂಶ ಹೆಚ್ಚಾಗಲು ಅನುಕೂಲವಾಗುತ್ತದೆ.
* KMF ನವರ ಪಶು ಆಹಾರಗಳು ಪ್ರತಿ ಲೀಟರಿಗೆ 300 ಗ್ರಾಂ ನಂತೆ ನೀಡುವುದರೊಂದಿಗೆ ನಂದಿನಿ ಮಿನರಲ್ ಪುಡಿಯನ್ನು ನಿಯಮಿತವಾಗಿ ಬಳಸಬಹುದು.
* Challenge feeding ವಿಧಾನದಿಂದಲೂ ಹಾಲಿನ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು.
* ಬೆದೆಗೆ ಬಂದಾಗ, ಜ್ವರ ಬಂದಾಗ, ಗರ್ಭ ಧರಿಸಿದಾಗ ಹಾಲಿನ ಇಳುವರಿ ಹಾಗೂ ಗುಣಮಟ್ಟ ಬದಲಾಗುತ್ತದೆ. ಈ ಬಗ್ಗೆ ಆತಂಕ ಬೇಡ.
* ರೈತರಿಗೆ ಪಶು ಪಾಲನೆಯಲ್ಲಿ ತೊಡಗಿಕೊಂಡಿರುವವರಿಗೆ ಈ ಬಗ್ಗೆ ಯಾವುದೇ ಗೊಂದಲ ಇದ್ದರೂ ಅಥವಾ ಏನೇ ಸಲಹೆಗಳು ಬೇಕಿದ್ದರೂ ಹೆಚ್ಚಿನ ವಿವರಗಳಿಗೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆ ಸಂಪರ್ಕಿಸಿ ಸಲಹೆ ಪಡೆಯಬಹುದು.