ಈರುಳ್ಳಿ ಬೆಳೆ ಬೆಳೆಯುವುದು ಈರುಳ್ಳಿ ಹೆಚ್ಚಿದಾಗ ಬರುವ ಕಣ್ಣ ನೀರಿನಂತೆ ಆಗಿದೆ. ಯಾಕೆಂದರೆ ಈರುಳ್ಳಿ ಬೆಳೆಗಾರರು ಬೆಳೆದಾಗ ಈರುಳ್ಳಿಗೆ ಬೆಲೆ ಇರುವುದಿಲ್ಲ, ಈರುಳ್ಳಿಗೆ ಬೆಲೆ ಬಂದಾಗ ಮಾರಾಟ ಮಾಡೋಣ ಎಂದರೆ ಅದನ್ನು ಶೇಖರಿಸಿಡುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಈರುಳ್ಳಿ ಬೇಗ ಹಾಳಾಗುವ ತರಕಾರಿ, ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದರೆ ಈರುಳ್ಳಿಯನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕಾಗಿ ರೈತರು ಬೆಳೆದ ಈರುಳ್ಳಿಯನ್ನು ಬೆಳೆದ ಸಮಯದಲ್ಲಿ ಇದ್ದಷ್ಟೇ ಬೆಲೆಗೆ ಮಾರಲು ನೋಡುತ್ತಾರೆ.
ಆದರೆ ಇದರ ಪ್ರಯೋಜನವನ್ನು ದಲ್ಲಾಳಿಗಳು ಪಡೆದುಕೊಳ್ಳುತ್ತಾರೆ. ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಗೋಡೌನ್ಗಳಲ್ಲಿ ಅದನ್ನು ಶೇಖರಿಸಿ ಬೆಲೆ ಹೆಚ್ಚಾದಾಗ ಮಾರಿಕೊಂಡು ಲಾಭ ಪಡೆದುಕೊಳ್ಳುತ್ತಾರೆ. ಇದರಿಂದ ಕಷ್ಟಪಟ್ಟು ಬೆವರು ಹರಿಸಿ ದುಡಿದ ರೈತನಿಗೆ ಅನ್ಯಾಯವಾಗುತ್ತಿದೆ. ಇದನ್ನೆಲ್ಲ ನಾವು ಅನೇಕ ಕಾಲದಿಂದ ನೋಡಿಕೊಂಡು ಬಂದಿದ್ದೇವೆ. ಆದರೆ ಇತ್ತೀಚೆಗೆ ದಲ್ಲಾಳಿಗಳ ಹಾವಳಿಯಿಂದ ರೈತರನ್ನು ತಪ್ಪಿಸಲು ರೈತರಿಗೆ ತಾವು ಬೆಳೆದ ಬೆಳೆಗಳನ್ನು ಶೇಖರಣೆ ಮಾಡಿಕೊಳ್ಳಲು ಸರ್ಕಾರವು ವ್ಯವಸ್ಥೆ ಮಾಡಿಕೊಡುತ್ತಿದೆ.
ಆ ಪ್ರಕಾರ ಈರುಳ್ಳಿ ಬೆಳೆಗಾರರಿಗೆ ತಮ್ಮ ಜಮೀನಿನಲ್ಲಿ ಈರುಳ್ಳಿ ಶೇಖರಣೆ ಮಾಡಿಟ್ಟುಕೊಳ್ಳಲು ಈರುಕ ಶೆಡ್ ನಿರ್ಮಿಸಲು ಸಹಾಯಧನ ನೀಡುವ ಮೂಲಕ ಅನುಕೂಲ ಮಾಡಿಕೊಡುತ್ತಿದೆ. ಸರ್ಕಾರ ಇದಕ್ಕಾಗಿ ಯೋಜನೆಯನ್ನು ಜಾರಿಗೆ ತಂದಿದ್ದು, ದೊಡ್ಡ ಮೊತ್ತದ ಹಣವನ್ನು ಈರುಳ್ಳಿ ಶೆಡ್ ನಿರ್ಮಿಸಿಕೊಳ್ಳಲು ರೈತರಿಗೆ ಸಹಾಯಧನವಾಗಿ ನೀಡುತ್ತಿದೆ. ಈ ಅಂಕಣದಲ್ಲಿ ಈರುಳ್ಳಿ ಬೆಳೆಗಾರರು ಶೆಡ್ ನಿರ್ಮಿಸುವುದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು.
ಆ ಪ್ರಕ್ರಿಯೆ ಹೇಗಿರುತ್ತದೆ ಮತ್ತು ಇದಕ್ಕಾಗಿ ಕೊಡಬೇಕಾದ ದಾಖಲೆಗಳೇನು ಎನ್ನುವ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರ್ಕಾರ ಮಾಡುತ್ತಿರುವ ಯೋಜನೆ ಇದಾಗಿದ್ದು ಈ ಮಾಹಿತಿಯನ್ನು ಹೆಚ್ಚಿನ ರೈತರಿಗೆ ತಿಳಿಯುವಂತೆ ಶೇರ್ ಮಾಡಿ.
ಈರುಳ್ಳಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ಕುಟುಂಬದ ಪಡಿತರ ಚೀಟಿ
● ಜಮೀನಿಗೆ ನೀರಿನ ವ್ಯವಸ್ಥೆ ಇರುವ ಬಗ್ಗೆ ಪತ್ರ
● 20 ರೂಪಾಯಿ ಸ್ಟ್ಯಾಂಪ್ ಪೇಪರಲ್ಲಿ ಹೇಳಿಕೆ, ಘೋಷಣೆ ಮತ್ತು ಸಹಿ
● ಅರ್ಜಿ ಫಾರಂ
● ರೈತನ ಬ್ಯಾಂಕ್ ಪಾಸ್ ಪುಸ್ತಕ
● ಫಾರಂ ನಂಬರ್ 6
● PDO ಸಹಿ ಹೊಂದಿರುವ ಕೆಲಸಗಾರನ ಜಾಬ್ ಕಾರ್ಡ್
ಜಮೀನಿನ ಪಹಣಿ
ಅರ್ಜಿ ಸಲ್ಲಿಸುವ ವಿಧಾನ:-
● ಈರುಳ್ಳಿ ಬೆಳೆ ಬೆಳೆಗಾರನಾದ ಸಣ್ಣ ರೈತ ಅಥವಾ ದೊಡ್ಡ ರೈತನು ಜೆರಾಕ್ಸ್ ಶಾಪ್ ಅಲ್ಲಿ ಸಿಗುವ ಅರ್ಜಿ ಫಾರಂ ಅನ್ನು ತಂದು ಭರ್ತಿ ಮಾಡಿ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ತೋಟಗಾರಿಕೆ ಇಲಾಖೆಯ ಕಚೇರಿಗೆ ಕೊಡಬೇಕು.
● ತೋಟಗಾರಿಕೆ ಇಲಾಖೆ ಪ್ರತಿನಿಧಿಯು ಅರ್ಜಿ ಪರಿಶೀಲಿಸಿ ಮೇಲಧಿಕಾರಿಯ ಅನುಮತಿ ಪಡೆದು ಕ್ರಿಯಾಯೋಜನೆ ಸಿದ್ಧಪಡಿಸುತ್ತಾರೆ.
● ಅದನ್ನು ಇಲಾಖೆಯ ಕಂಪ್ಯೂಟರ್ನಲ್ಲಿ ಡಾಟಾ ರೂಪದಲ್ಲಿ ಎಂಟ್ರಿ ಮಾಡಿದ ಮೇಲೆ ಕ್ಷೇತ್ರ ಪ್ರತಿನಿಧಿಯು ಈರುಳ್ಳಿ ಬೆಳೆಯುವ ಜಮೀನಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ.
● ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಎಷ್ಟು ಸಹಾಯಧನ ನೀಡಬೇಕು ಎನ್ನುವುದು ನಿರ್ಧಾರವಾಗುತ್ತದೆ. 60,000ರೂ. ದಿಂದ 1,60,000ರೂ. ವರೆಗೂ ಕೂಡ ಸಹಾಯಧನ ಪಡೆಯಬಹುದು.
● ಈ ಸಹಾಯಧನದ ಶೇಕಡ 60%ರಷ್ಟು ಹಣವನ್ನು ಮೆಟೀರಿಯಲ್ ಅಂಗಡಿಗಳಿಗೆ ಕೊಡುತ್ತಾರೆ.
● ಕೆಲಸಗಾರನ ಕೂಲಿಯು ಉದ್ಯೋಗ ಖಾತ್ರಿ ಯೋಜನೆಯಡಿ DBT ಮೂಲಕ ನೇರವಾಗಿ ಆತನ ಅಕೌಂಟಿಗೆ ಸೇರುತ್ತದೆ.
● 10% ಹಣವನ್ನು ರೈತನ ಇನ್ನಿತರ ಖರ್ಚಿಗಾಗಿ ನೀಡಲಾಗುತ್ತದೆ.