ಇ-ಸ್ವತ್ತು ಪಡೆಯುವುದು ಇನ್ಮುಂದೆ ತುಂಬಾ ಸುಲಭ, ಹೆಚ್ಚಿನ ಹಣ ಕೊಡಬೇಕಿಲ್ಲ ತಿಂಗಳುಗಟ್ಟಲೇ ಕಾಯಬೇಕಿಲ್ಲ.!

 

ನಾಡಕಛೇರಿ ಹಾಗೂ ತಾಲ್ಲೂಕು ಕಛೇರಿ ಮಾತ್ರ ಚಾಲ್ತಿಯಲ್ಲಿದ್ದ ದಿಶಾಂಕ್ ಆಪ್ ನ್ನು (dishaank app) ಗ್ರಾಮಮಟ್ಟದಲ್ಲಿ ಪರಿಚಯಿಸಲು ಸರಕಾರ ನಿರ್ಧರಿಸಿದೆ. ಈ ಸ್ವತ್ತು (e-swathu) ನೀಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ದಿಶಾಂಕ್ ಆಪ್ ಅನ್ನು ಗ್ರಾಮ ಮಟ್ಟದಲ್ಲಿ (Grama panchayath) ಪರಿಚಯಿಸಿದರೆ ಈಗಿನಂತೆ ಗ್ರಾಹಕರು ಇ-ಖಾತೆ ದಾಖಲೆ ಪತ್ರ ಪಡೆಯಲು ತಿಂಗಳಗಟ್ಟಲೇ ಕಾಯುವುದು ಹಾಗೂ ಹೆಚ್ಚು ಹಣ ತೆರುವುದು ತಪ್ಪುತ್ತದೆ.

ಈ ಉದ್ದೇಶದಿಂದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು (Panchayath raj department) ಇಂತಹದೊಂದು ನಿರ್ಧಾರಕ್ಕೆ ಬಂದಿದೆ. ದಿಶಾಂಕ್ ಆಪ್ ಒಂದು ಮೊಬೈಲ್‌ ಅಪ್ಲಿಕೇಶನ್‌ ಆಗಿದೆ. ಅದು ಕರ್ನಾಟಕದ ಪೂರ್ತಿ ಆಸ್ತಿ, ಪ್ಲಾಟ್‌ಗಳ ವಿವರಗಳನ್ನು ಕಂಡುಹಿಡಿಯಲು ನೆರವಾಗುತ್ತದೆ. ಈ ಮಾಹಿತಿಯು ಭೂಮಿಯ ಮಾಲೀಕತ್ವ, ವಿಸ್ತೀರ್ಣ, ನಕ್ಷೆ ಇತ್ಯಾದಿಗಳನ್ನು ಒಳಗೊಂಡಿದ್ದು ಈ ಆ್ಯಪ್‌ ಕರ್ನಾಟಕದ ಗ್ರಾಮಗಳ ಭೂ-ಉಲ್ಲೇಖಿತ ನಕ್ಷೆಗಳನ್ನು ಒಳಗೊಂಡಿದೆ.

ಭೂಮಿ ಡೇಟಾಬೇಸ್‌ನಲ್ಲಿ ಕೂಡ ಈ ದಿಶಾಂಕ್ ಆಪ್ ನಲ್ಲಿ ದಾಖಲಾದ ಮಾಹಿತಿಗಳನ್ನು ಭೂ ದಾಖಲೆಗಳಿಗೂ ಕೂಡ ಲಿಂಕ್‌ ಮಾಡಲಾಗಿದೆ. ಆಸ್ತಿ-ಸಂಬಂಧಿತ ವಂಚನೆಗಳನ್ನು ಕಡಿಮೆ ಮಾಡಲು ಹಾಗೂ ಆಸ್ತಿ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಭೂಮಿ ಕುರಿತು ನಿಖರ ಮಾಹಿತಿ ಪಡೆದುಕೊಳ್ಳುವುದು ಇದರ ಉದ್ದೇಶವಾಗಿದೆ. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಜಾರಿಗೆ ತರುವುದರಿಂದ ಶೀಘ್ರವಾಗಿ ಗ್ರಾಹಕರಿಗೆ ತಮ್ಮ ಜಮೀನಿನ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತದೆ.

ಯಾಕೆಂದರೆ ಈಗಿರುವ ಪದ್ಧತಿಯ ಪ್ರಕಾರ ಇದು ಹೆಚ್ಚು ಸಮಯ ಹಾಗೂ ಹೆಚ್ಚು ಹಣವನ್ನು ಪಡೆಯುವ ಪ್ರಕ್ರಿಯೆಯಾಗಿದೆ. ಈಗ ಇ-ಸ್ವತ್ತು ಪಡೆಯಬೇಕೆಂದರೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 2ಎ, ನಮೂನೆ 2ಬಿ ಪಡೆಯಲು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಗ್ರಾ.ಪಂ ಅಧಿಕಾರಿಗಳು ಆ ಆಸ್ತಿಯು ತಮ್ಮ ವ್ಯಾಪ್ತಿಯ ಒಳಗೆ ಬರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಮೋಜಣಿ ತಂತ್ರಾಂಶದ ಮೂಲಕ ಆನ್‌ಲೈನ್‌ ಅರ್ಜಿಯನ್ನು ಮುಂದಕ್ಕೆ ಕಳುಹಿಸುತ್ತಿದ್ದರು.

ತದನಂತರ ಅರ್ಜಿದಾರರು ನಾಡಕಚೇರಿ ಕೇಂದ್ರಗಳಿಗೆ ಭೇಟಿ ನೀಡಿ 800 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕಿತ್ತು. ಅದಾದ ಬಳಿಕ ಭೂಮಾಪಕರು ಅಳತೆ ಮಾಡಿ ಸದರಿ ಆಸ್ತಿಯು ಗ್ರಾಮ ಠಾಣಾ ಒಳಗೆ ಅಥವಾ ಹೊರಗೆ ಬರುವ ಬಗ್ಗೆ ದಾಖಲೆಗಳೊಂದಿಗೆ ಮಾಹಿತಿಯನ್ನು ಮೋಜಣಿ ತಂತ್ರಾಂಶದ ಮೂಲಕ ಗ್ರಾ.ಪಂ ಗೆ ಸಲ್ಲಿಸುತ್ತಿದ್ದರು ಹೀಗಾಗಿ ಇದೊಂದು ಧೀರ್ಘಕಾಲದ ಪ್ರೋಸೆಸ್ ಆಗಿತ್ತು.

ಆದರೆ ದಿಶಾಂಕ್‌ ಆ್ಯಪ್‌ ಬಳಸುವದರಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಪ್ರಕ್ರಿಯೆ ಮುಗಿಯಲಿದೆ. ಅರ್ಜಿದಾರರ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ದ್ವಿತೀಯ ಸಹಾಯಕರು ಅರ್ಜಿದಾರರು ಕೊಟ್ಟ ದಾಖಲೆಗಳ ಆಧಾರದ ಮೇಲೆ ದಿಶಾಂಕ್‌ ಆ್ಯಪ್‌ ಮೂಲಕ ಆಸ್ತಿ/ಸ್ವತ್ತಿನ ಪ್ರತಿಯೊಂದು ಮೂಲೆಯ ಜಿಪಿಎಸ್‌ ಮತ್ತು ಸದರಿ ಆಸ್ತಿ/ಸ್ವತ್ತಿನ ಛಾಯಾಚಿತ್ರ ಸೆರೆ ಹಿಡಿಯುವರು.

ಇದರಿಂದ PDO ಗಳು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಭೌತಿಕ ಸ್ಥಳಕ್ಕೆ ಭೇಟಿ ಕೊಡಬೇಕಾದ ಅವಶ್ಯಕತೆ ಇರುವುದಿಲ್ಲ. ಆಪ್ ಮೂಲಕವೇ ಪರಿಶೀಲಿಸಿ ಧೃಡೀಕರಿಸಬಹುದು. ಇದರಿಂದಾಗಿ ಸಮಯ ಉಳಿಯಲಿದೆ ಜೊತೆಗೆ ಆಪ್ ಮೂಲಕ ಪ್ರಕ್ರಿಯೆ ನಡೆಯುವುದರಿಂದ ಅರ್ಜಿ ಶುಲ್ಕ ಕೇವಲ 200ರೂ. ಇರಲಿದೆ ಇದರಿಂದ ಶೇ.80-90ರಷ್ಟು ಅರ್ಜಿಗಳು ಗ್ರಾಮಠಾಣಾ ಮಟ್ಟದಲ್ಲೇ ನಿಗದಿತ ಸಮಯದಲ್ಲಿ ವಿಲೇವಾರಿಯಾಗಲಿವೆ.

ಉಳಿದ ಶೇ.10ರಷ್ಟು ಅರ್ಜಿಗಳು ಮಾತ್ರ ಸರ್ವೆ ಇಲಾಖೆಗೆ ರವಾನೆಯಾಗಲಿವೆ. ಇದರಿಂದ ಅರ್ಜಿದಾರನಿಗೂ ಹಾಗೂ ಸರಕಾರಕ್ಕೂ ಕೂಡ ಅನುಕೂಲವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ರಾಜ್ಯ ಪರಿಷತ್‌ ಸದಸ್ಯರು ಎಚ್‌.ಆರ್‌.ರಾಜೇಶ್‌ ತಿಳಿಸಿದ್ದಾರೆ.

Leave a Comment

%d bloggers like this: