ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ 5 ಗ್ಯಾರೆಂಟಿ ಯೋಜನೆಗಳ ಘೋಷಣೆ ಮಾಡಿ, ಗ್ಯಾರೆಂಟಿ ಕಾರ್ಡ್ ಕೂಡ ವಿತರಣೆ ಮಾಡಿತ್ತು. ಈಗ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಪಡುತ್ತಿದೆ. ಶಕ್ತಿ ಯೋಜನೆ ಲಾಂಚ್ ಮತ್ತು ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ ಆದ ಬಳಿಕ ಉಳಿದ ಯೋಜನೆಗಳ ಬಗ್ಗೆ ಚಿಂತನೆ ನಡೆಸುತ್ತಿರುವ ಸರ್ಕಾರ.
ಜುಲೈ ತಿಂಗಳಿನಲ್ಲಿಯೇ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುತ್ತಿರುವ ಪಡಿತರವನ್ನು 10 ಕೆಜಿಗೆ ಏರಿಸುತ್ತೇವೆ ಎಂದು ಹೇಳಿದ್ದ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಇದಕ್ಕಾಗಿ FCI ಇಂದ ಮತ್ತು ಇತರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಪಟ್ಟ ಪ್ರಯತ್ನವೂ ವಿಫಲವಾಗಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆದು, ಸದ್ಯಕ್ಕೆ ಈಗ ಅಕ್ಕಿ ದಾಸ್ತಾನು ಇಲ್ಲದ ಕಾರಣ ಯಾವುದೇ ರಾಜ್ಯಗಳಿಂದ ಅಕ್ಕಿ ಖರೀದಿ ಸಾಧ್ಯವಾಗದ ಕಾರಣ ಪ್ರಯತ್ನಗಳೆಲ್ಲವೂ ವಿಫಲವಾಗಿರುವುದರಿಂದ ಹೆಚ್ಚುವರಿ ಅಕ್ಕಿಯ ಬದಲು ಹಣ ನೀಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಪ್ರತಿ Kg ಗೆ 34 ರೂಗಳಂತೆ ದರ ತೆತ್ತು ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಸರ್ಕಾರ ನಿರ್ಧಾರ ಮಾಡಿತ್ತು.
ಈಗ ಇದು ಸಾಧ್ಯವಾಗದ ಕಾರಣ ಅಕ್ಕಿ ದೊರೆಯುವವರೆಗೂ ಕೂಡ ಅದೇ ಲೆಕ್ಕಾಚಾರದಲ್ಲಿ 5Kg ಅಕ್ಕಿ ಬದಲು ಒಬ್ಬ ಸದಸ್ಯನಿಗೆ 170 ರೂಗಳಂತೆ ಹಣ ನೀಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬಳಿಕ ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ಜನಸಾಮಾನ್ಯರಿಗೆ ಹಲವಾರು ಗೊಂದಲಗಳಾಗಿವೆ. ಇವುಗಳ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 5Kg ಅಕ್ಕಿ ಕೇಂದ್ರದಿಂದ ದೊರೆಯುತ್ತಿತ್ತು. ಹೆಚ್ಚುವರಿಯಾಗಿ 5Kg ಕೊಡುವುದಾಗಿ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು.
ಆದರೆ ಈಗ ಎಂದಿನಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 5Kg ಅಕ್ಕಿ ದೊರೆಯಲಿದೆ. ಉಳಿದ 5Kg ಅಕ್ಕಿ ಬದಲಿಗೆ 34 ರೂಗಳಂತೆ 5 Kgಗೆ 170 ರೂಪಾಯಿಗಳು ಹಾಗೂ ಒಬ್ಬ ಸದಸ್ಯನಿಗೆ 170 ರೂಗಳಂತೆ ಒಂದು ರೇಷನ್ ಕಾರ್ಡ್ ಅಲ್ಲಿ ಎಷ್ಟು ಸದಸ್ಯರಿದ್ದಾರೆ ಆ ಒಟ್ಟು ಸದಸ್ಯರ ಮೊತ್ತವು ಆ ಕುಟುಂಬದ ಯಜಮಾನನ ಖಾತೆಗೆ DBT ಮೂಲಕ ಜಮೆ ಆಗಲಿದೆ.
ಒಂದು ರೇಷನ್ ಕಾರ್ಡಲ್ಲಿ ಇಬ್ಬರು ಸದಸ್ಯರಿದ್ದರೆ 10Kg ಅಕ್ಕಿ + ರೂ.340, ಮೂರು ಸದಸ್ಯರಿದ್ದರೆ 15Kg ಅಕ್ಕಿ + ರೂ.510, ನಾಲ್ಕು ಸದಸ್ಯರಿದ್ದರೆ 20Kg ಅಕ್ಕಿ + ರೂ.680, ಐದು ಸದಸ್ಯರಿದ್ದರೆ 25Kg ಅಕ್ಕಿ + ರೂ.850 ನೀಡಲು ಸರ್ಕಾರ ನಿರ್ಧಾರಕ್ಕೆ ಬಂದಿದೆ. ಕುಟುಂಬದ ಯಜಮಾನನಾಗಿ ರೇಷನ್ ಕಾರ್ಡ್ ನ ಮೊದಲ ಪುಟದಲ್ಲಿ ಯಾರ ಹೆಸರು ಇರುತ್ತದೆಯೋ ಅವರನ್ನೇ ಆರಿಸುವ ನಿರ್ಧಾರಕ್ಕೂ ಬಂದಿದೆ.
ಆದರೆ ಅರ್ಜಿ ಹಾಕುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಬಲವಾದ ಮೂಲಗಳ ಪ್ರಕಾರ ಇದಕ್ಕಾಗಿ ಪ್ರತ್ಯೇಕ ಅರ್ಜಿ ಕರೆಯುವ ಸಾಧ್ಯತೆ ಕೂಡ ಕಡಿಮೆ ಇದ್ದು ಆ ಯಜಮಾನನ ಆಧಾರ್ ಲಿಂಕ್ ರೇಷನ್ ಕಾರ್ಡಿಗೆ ಲಿಂಕ್ ಆಗಿರುವುದರಿಂದ, ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆಗೆ ಈ ಹಣ DBT ಮೂಲಕ ವರ್ಗಾವಣೆ ಆಗಲಿದೆ ಎನ್ನುವ ಮಾತಿದೆ.