ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗುತ್ತಿರುವ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮುಂತಾದ ಯೋಜನೆಗಳನ್ನು ಹೆಸರಿಸಲೇಬೇಕು. ಮೊದಲ ಬಾರಿಗೆ ಕೃಷಿ ಸಂಬಂಧಿ ಯೋಜನೆ ಮೂಲಕ ರೈತರಿಗೆ ಕೃಷಿ ಚಟುವಟಿಕೆ ಹಣದ ಕೊರತೆಯನ್ನು ತಗ್ಗಿಸಲು ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿದೆ.
ಅದೇ ರೀತಿ ಮೊದಲ ಬಾರಿಗೆ ರೈತರಿಗೆ ಕೂಡ ತಮ್ಮ ಬೆಳೆಗಳಿಗೆ ವಿಮೆ ಮಾಡುವ ಅವಕಾಶವನ್ನು ನೀಡಲಾಗುತ್ತಿದೆ. ಆಯಾ ಭಾಗದ ರೈತರು ತಮ್ಮ ಜಿಲ್ಲೆಗಳಲ್ಲಿ ಬೆಳೆಯುವ ವಿಶೇಷ ಬೆಳೆಗಳ ಪಟ್ಟಿಯಲ್ಲಿ ಯಾವ ಬೆಳೆಯನ್ನು ಬೆಳೆಯಲು ಆರಿಸಿ ಕೊಡುತ್ತಾರೋ ಅದಕ್ಕೆ ವಿಮೆ ಖರೀದಿಸಿ ಪ್ರೀಮಿಯಂ ಗಳನ್ನು ಪಾವತಿಸಿದರೆ, ಪ್ರಕೃತಿ ವೈಪರೀತ್ಯಗಳಾದಾಗ ಆ ವಿಮೆಯನ್ನು ಕ್ಲೈಮ್ ಮಾಡಬಹುದು.
ರಾಜ್ಯದಲ್ಲಿ ಅನೇಕ ರೈತರು ಫಸಲ್ ಭೀಮಾ ಯೋಜನೆ ಬಂದ ಮೇಲೆ ಈ ಯೋಜನೆಯಲ್ಲಿ ಬೆಳೆವಿಮೆ ಕಟ್ಟಿ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾದಾಗ ಆ ಬೆಳೆ ವಿಮೆಯ ಪರಿಹಾರ ಧನವನ್ನು ಕೂಡ ಪಡೆದಿದ್ದಾರೆ. ಆದರೆ ಈ ಬಾರಿ ರಾಜ್ಯದಲ್ಲಿ ಈ ವಿಚಾರವಾಗಿ ಅನೇಕ ಗೊಂದಲ ಉಂಟಾಗಿದೆ. ಹೇಗೆಂದರೆ, ಈಗಾಗಲೇ ಮುಂಗಾರಿನ ಕೃಷಿ ಚಟುವಟಿಕೆ ಗರಿಗೆದರಿದೆ.
ರೈತರು ಮುಂಗಾರಿನ ಬಿತ್ತನೆ ಮಾಡಲು ಭೂಮಿಯನ್ನು ಸಿದ್ಧಗೊಳಿಸಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಖರೀದಿಸಿ ತಯಾರಿಯಲ್ಲಿದ್ದಾರೆಹ ಆದರೆ ವರುಣನು ರಾಜ್ಯದ ಎಲ್ಲೆಡೆ ಕೂಡ ಒಂದೇ ರೀತಿ ಕರುಣಿಸಿಲ್ಲ. ಕೆಲವೆಡೆ ವಿಪರೀತವಾಗಿ ಮುಂಗಾರು ಮಳೆ ಸಿಂಚನವಾಗುತ್ತಿದ್ದರೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಹಲವು ವಿಭಾಗಗಳಿಗೆ ಮಳೆ ಸಿಂಚನವಿಲ್ಲದೆ ಕೆಲ ಗ್ರಾಮದ ಜನರು ಗುಳೇ ಹೋಗುವ ಪರಿಸ್ಥಿತಿ ಎದುರಾಗಿದೆ.
ಆ ಭಾಗದ ರೈತರು ಬಿತ್ತನೆ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿ ತಲುಪಿದ್ದಾರೆ. ಮಳೆ ಬೀಳದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಈಗಲೂ ಕೂಡ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡುವುದೇ ಅನುಮಾನವಾಗಿದೆ. ಹಾಗಾಗಿ ಬೆಳೆವಿಮೆಯನ್ನಾದರೂ ಖರೀದಿಸಲು ಬಿತ್ತನೆಯನ್ನೇ ಮಾಡಿಲ್ಲವಲ್ಲ ಅರ್ಜಿ ಸಲ್ಲಿಸಲು ಅರ್ಹರೇ ಇಲ್ಲವೇ ಎನ್ನುವ ಗೊಂದಲದಲ್ಲಿ ಆ ಭಾಗದ ರೈತರು ಇದ್ದಾರೆ.
ಪ್ರಜಾವಾಣಿ ಜುಲೈ 17ರಂದು ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ರೈತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಲ್ ಅವರು ಮಳೆ ಕೊರತೆ ಇದ್ದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗದೆ ಇದ್ದರೂ ಬೆಳೆ ವಿಮೆ ಕಂತು ಪಾವತಿ ಮಾಡುವ ಮೂಲಕ ರೈತರು ವಿಮೆ ಪಡೆಯಬಹುದು ಈ ವಿಚಾರವಾಗಿ ಗೊಂದಲ ಪಡುವುದು ಬೇಡ ಎಂದು ಅಭಯವಿತ್ತಿದ್ದಾರೆ.
ಬಿತ್ತನೆ ಮಾಡಿ ಬೆಳೆ ಹಾನಿ ಆದ ಸಂದರ್ಭದಲ್ಲಿ ಮಾತ್ರ ಬೆಳೆ ವಿಮೆ ಸಿಗುತ್ತದೆ ಎನ್ನುವ ಗೊಂದಲ ಬೇಡ ಎಂದಿನಂತೆ ನಿಮ್ಮ ಭಾಗದ ಬೆಳೆಗಳಲ್ಲಿ ನೀವು ಯಾವ ಬೆಳೆಯನ್ನು ಬೆಳೆಯಬೇಕು ಎಂದು ನಿರ್ಧಾರ ಮಾಡಿದ್ದೀರಾ ಆ ಬೆಳೆಯ ಕಂತನ್ನು ಫಸಲು ಭೀಮಾ ಯೋಜನೆಯಡಿ ಪಾವತಿ ಮಾಡಿ ಆ ಬೆಳೆ ವಿಮೆಯ ಶೇಕಡ 25%ರಷ್ಟು ನಿಮಗೆ ಪರಿಹಾರ ಧನವಾಗಿ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಈ ಬೆಳೆ ವಿಮೆ ಕಂತನ್ನು ಜುಲೈ 31ರ ಒಳಗೆ ಬ್ಯಾಂಕ್ ಅಥವಾ ಸೇವಾಸಿಂಧು ಕೇಂದ್ರಗಳಲ್ಲಿ ತುಂಬಬೇಕು ಎಂದು ಸೂಚಿಸಿದ್ದಾರೆ.